Published On: Wed, Dec 9th, 2020

ಮೋಹಕ ಯಕ್ಷಗಾನ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಮರಳಿ ಶ್ರೀ ಕಟೀಲು ಮೇಳಕ್ಕೆ

ಸುಪ್ರಸಿಧ್ಧ ಪುಂಡುವೇಷಧಾರಿ , ಸಮಕಾಲೀನ ಪುಂಡುವೇಷಧಾರಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಮೋಹನ್ ಕುಮಾರ್ ಅಮ್ಮುಂಜೆ ಈ ಸಾಲಿನ ತಿರುಗಾಟದಿಂದ ಮರಳಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ . 26 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ್ದ ಅಮ್ಮುಂಜೆ , ಮೂರು ವರ್ಷಗಳ ಬಳಿಕ , ಎಡನೀರು , ಬಪ್ಪನಾಡು ಮೇಳದಲ್ಲಿ ಸೇವೆ ಸಲ್ಲಿಸಿ ಪುನಃ ಕಟೀಲು ಮೇಳ ಸೇರಿದ್ದಾರೆ . ಶ್ರೀ ಕಟೀಲು ಮೇಳದ ಆರು ಮೇಳಗಳು ನಾಳೆಯಿಂದ ( 09.12 .2020 ) ತನ್ನ ಈ ವರ್ಷದ ತಿರುಗಾಟ ಆರಂಭಿಸಲಿದೆ .c8d3751e-b890-4fa6-9d00-a8d1f5728df9

ಉತ್ತಮ ಅಂಗಸೌಷ್ಟವ, ಚುರುಕಿನ ನಾಟ್ಯ , ಲಾಸ್ಯದಿಂದೊಡಗೂಡಿದ ಆಂಗಿಕ ಚಲನೆ , ರಸಭಾವಕ್ಕನುಸಾರವಾಗಿ ಮಾತುಗಾರಿಕೆ, ಉತ್ತಮ ಕಂಠ, ಸಾಹಿತ್ಯಶುಧ್ಧಿಯನ್ನೊಳಗೊಂಡ ಸಂಭಾಷಣ ಕೌಶಲ್ಯ , ರಾಮಾಯಣ, ಮಹಾಭಾರತ, ಪುರಾಣಗಳ ಅಪಾರ ಜ್ಞಾನ – ಇವೆಲ್ಲಾ ಮೇಳೈಸಿದ ಕಾರಣ ಅಮ್ಮುಂಜೆ ಮೋಹನರು ಇಂದು ಸುಪ್ರಸಿಧ್ಧರಾಗಿ ಗುರುತಿಸುವಂತಾಗಿದೆ . ಗುರುಮಖೇನ ಕಲಿತ ವಿದ್ಯೆಯನ್ನು ಸತತ ಅಭ್ಯಾಸದಿಂದ ವೃಧ್ಧಿಸಿಕೊಳ್ಳಬೇಕಾದುದು ವಿದ್ಯಾರ್ಥಿಯ ಲಕ್ಷಣ. ಇದನ್ನು ಚೆನ್ನಾಗಿ ಅರಿತು, ಸತತ ಪರಿಶೃಮದಿಂದ ಗುರಿಯನ್ನು ಸಾಧಿಸಿದ ಕಾರಣ ಯಕ್ಷರಂಗದಲ್ಲಿ ಇಂದು ” ಅಮ್ಮುಂಜೆ ” ಶ್ರೇಷ್ಟ ಕಲಾವಿದರೆಂಬ ನೆಗಳ್ತೆಗೆ ಪಾತ್ರರಾಗಿದ್ದಾರೆ .ಮೂಲತಃ ಪುಂಡು ವೇಷಧಾರಿಗಳಾದರೂ ರಾಜ ವೇಷ, ಪೋಷಕ ಪಾತ್ರ , ಕಸೆ ಸ್ತ್ರೀ ವೇಷಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲರು . ಅಭಿಮನ್ಯು , ಕುಶ, ಬಬ್ರುವಾಹನ , ಶ್ರೀಕೃಷ್ಣ , ಶ್ರೀರಾಮ , ತರಣಿಸೇನ, ಮಾರ್ತಾಂಡತೇಜ , ಧರ್ಮಾಂಗದ , ಆಶ್ವತ್ತಾಮ , ಮನ್ಮಥ ‘ ಭಾರ್ಗವ ಹಾಗೂ ಕೋಲುಕಿರೀಟದಲ್ಲಿ ಅರ್ಜುನ , ದೇವೇಂದ್ರ , ಇಂದ್ರಜಿತು, ಹಿರಣ್ಯಾಕ್ಷ , ಅತಿಕಾಯ , ಕೌಶಿಕ ವಿಭಿನ್ನ ಪಾತ್ರಗಳಾದ ಜಾಂಬವ, ಹನೂಮಂತ, ಜಾಬಾಲಿ , ವೀರಮಣಿ, ಖಳಪಾತ್ರಗಳಾದ ಚಂಡ , ದುರ್ಜಯಾಸುರ, ರಾವಣ , ಕಂಸ , ಅರುಣಾಸುರ , ಶಿಶುಪಾಲ , ಮಾಗಧ , ಸ್ತ್ರೀಪಾತ್ರಗಳಾದ ಶಿವಪ್ರಭೆ , ಶಶಿಪ್ರಭೆ , ಸ್ವೈರಿಣಿ, ಭೃಮರಕುಂತಳೆ ಮುಂತಾದ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಅಮ್ಮುಂಜೆಯವರ ಸಾಧನೆ ಗಮನಾರ್ಹ.

fcfbe5fe-ea6e-4294-b454-257b7a477eb7
” ಸುಧನ್ವ ” ಪಾತ್ರವಂತೂ ಅಮ್ಮುಂಜೆಯವರಿಗೆ ಅಪಾರ ಪ್ರಸಿಧ್ಧಿಯನ್ನು ತಂದಿದೆ. ಸುಧನ್ವನ ಮಾನಸಿಕ ತುಮುಲವನ್ನು ಬಿಂಬಿಸುವ ಪರಿ ಅನನ್ಯ . ಯಾವದೇ ಪಾತ್ರವನ್ನು ನಿರ್ವಹಿಸುವಾಗ ಆ ಪಾತ್ರದ ಒಳಗನ್ನು ಅರಿತು, ಬಳಿಕ ನಿರ್ವಹಿಸುವುದು ಅಮ್ಮುಂಜೆಯವರ ಕ್ರಮ. ಪಾತ್ರಗಳ ಕಥಾಚೌಕಟ್ಟನ್ನು ಮೀರದ ಚಿತ್ರಣವನ್ನು ಕೊಡುವಲ್ಲಿ ಅಮ್ಮುಂಜೆಯವರು ಸಿಧ್ಧಹಸ್ತರು . ಮಾನಿಷಾದ ದ ರೂಕ್ಷನಾಗಲೀ, ಶ್ರೀನಿವಾಸ ಕಲ್ಯಾಣದ ಕಿರಾತನಾಗಲೀ , ಶ್ರೀದೇವಿ ಮಹಾತ್ಮೆ ಯ ಚಂಡನಾಗಲಿ ಅಮ್ಮುಂಜೆಯವರು ನಿರ್ವಹಿಸುವಂತೆ ಇತರರಿಂದ ಮಾಡಲು ಸಾಧ್ಯವಾಗದಿರಲು ಇದೇ ಕಾರಣವಾಗಿದೆ. ಪ್ರಸಂಗದ , ಪ್ರಸಂಗಕರ್ತರ ಆಶಯವೇನುಂಟೋ ಅದನ್ನು ಅರಿತು ಪಾತ್ರವನ್ನು ಕಟೆದು ನಿಲ್ಲಿಸುವ ಶೈಲಿ ಅಮ್ಮುಂಜೆಯವರಿಗೆ ಕರಗತವಾಗಿದೆ.0735ca76-8472-4d54-8cea-9c95a4fd2e5a

ಪೊಳಲಿ ಸೀಮೆಗೊಳಪಟ್ಟ ಅಮ್ಮುಂಜೆ ಗ್ರಾಮದ ಬಟ್ಲಬೆಟ್ಟುವಿನ ವೆಂಕಪ್ಪ ಬೆಳ್ಚಡ – ಸುಶೀಲಾ ಬೆಳ್ಚಡ್ತಿ ದಂಪತಿಯರ ಕೊನೆಯ ಪುತ್ರರಾಗಿ 04..07.1973 ರಲ್ಲಿ ಜನಿಸಿದ ಅಮ್ಮುಂಜೆ ಮೋಹನರದು ಬಡತನದ ಕುಟುಂಬ. ಆದರೂ ಬಾಲ್ಯದಿಂದಲೇ ಮೋಹನನಿಗೆ ಯಕ್ಷಗಾನದ ಆಸಕ್ತಿ . ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ಇವನ ಯಕ್ಷಗಾನದ ಆಸಕ್ತಿ ಗಮನಿಸಿದ ಈತನ ಬಾವ ಶೀನ ಬೆಳ್ಚಡ ಹಾಗೂ ಕಿರಿಯ ಸಹೋದರ ಅಮ್ಮುಂಜೆ ಜನಾರ್ಧನರು , ಮೋಹನನನ್ನು ಕೆನರಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಹಾಗೂ ಯಕ್ಷಗಾನ ಕಲಾವಿದರಾದ ಗುಂಡಿಲಗುತ್ತು ಶಂಕರಶೆಟ್ಟರ ಬಳಿ ಕಳಿಸಿದರು.58086989-c2a4-47eb-908e-d1f095c8e5f8

ಶಂಕರಶೆಟ್ಟರು ಮೋಹನನಿಗೆ ಯಕ್ಷಗಾನದ ಪ್ರಾಥಮಿಕ ಪಾಠ ಕಲಿಸಿದರು . ಮುಂದೆ ತರಬೇತಿ ಶಿಬಿರ ಒಂದರಲ್ಲಿ ಪಡ್ರೆ ಚಂದುರವರಲ್ಲಿ ಶಿಷ್ಯತ್ವ ಸ್ವೀಕರಿಸಿ, ಪೂರ್ಣಾವಧಿ ಕಲಾವಿದನಾಗಬೇಕೆಂಬ ಆಕಾಂಕ್ಷೆಯಿಂದ ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿದರು. ಕೇಂದ್ರದಲ್ಲಿ ಆಗ ಗುರುಗಳಾಗಿದ್ದವರು ಸುಪ್ರಸಿಧ್ಧ ಕಲಾವಿದರಾದ ಕೊಳ್ಯೂರು ರಾಮಚಂದ್ರ ರಾಯರು . ಅವರಲ್ಲಿ ಯಕ್ಷಗಾನದ ಸಂಪೂರ್ಣ ಅಂಗಗಳನ್ನು ಕರಗತ ಮಾಡಿಕೊಂಡು ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದರು.1991 ರಲ್ಲಿ ತಮ್ಮ 18 ನೇ ವಯಸ್ಸಿನಲ್ಲಿ ಕಟೀಲು 3 ನೇ ಮೇಳಕ್ಕೆ ಸೇರಿ ಯಕ್ಷರಂಗ ಪ್ರವೇಶಿಸಿದರು.

ಪ್ರಾರಂಭದಲ್ಲಿ ಮೋಹನರಿಗೆ ಸಿಕ್ಕಿದ್ದು ಕೋಡಂಗಿ ಪಾತ್ರ . ಆ ಪಾತ್ರ ಸಣ್ಣದಾದರೂ ಬೇಸರಗೊಳ್ಳದೇ ಶೃಧ್ಧೆಯಿಂದ ನಿರ್ವಹಿಸುತ್ತಿದ್ದರು .ಆಗ ಕಟೀಲು 3 ನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದವರು , ಉತ್ತಮ ಯಕ್ಷಗಾನ ನಿರ್ದೇಶಕರೆಂದು ಪ್ರಸಿಧ್ಧಿ ಹೊಂದಿದ ಕುರಿಯ ಗಣಪತಿ ಶಾಸ್ತ್ರಿಗಳು . ಕುರಿಯರ ಧೃಷ್ಟಿ ಅಮ್ಮುಂಜೆಯ ಮೇಲೆ ಬಿತ್ತು. ಕುರಿಯರು ಅಮ್ಮುಂಜೆಯವರಿಗೆ ಉತ್ತಮ ಪಾತ್ರಗಳನ್ನು ಕೊಟ್ಟು ಪ್ರಸಂಗದ ನಡೆ , ಪಾತ್ರದ ಕ್ರಮ ಎಲ್ಲಾ ತಿಳಿಸಿ, ತಪ್ಪಿದಲ್ಲಿ ತಿದ್ದಿ ತೀಡಿ
” ಅಮ್ಮುಂಜೆ ಮೋಹನ ” ಎಂಬ ಶಿಲ್ಪವನ್ನು ಕೆತ್ತಿದರು.

ಕುರಿಯರ ರಂಗ ನಿರ್ದೇಶನದಲ್ಲಿ ಅಮ್ಮುಂಜೆಯು ಕಟೀಲು ಮೇಳದಲ್ಲಿ ಮಿಂಚತೊಡಗಿದರು . ಅಭಿಮನ್ಯು , ಬಬ್ರುವಾಹನ , ಭಾರ್ಗವ , ಕುಶ ಮುಂತಾದ ಪುಂಡುವೇಷಗಳಿಂದ ಯಕ್ಷಗಾನ ಅಭಿಮಾನಿಗಳ ಮನ ಸೂರೆಗೊಂಡರು .ಇದು ಕಟೀಲು ಮೇಳದ ಯಜಮಾನರಾದ ದೇವಿಪ್ರಸಾದ್ ಶೆಟ್ಟರ ಕಿವಿಗೂ ಬಿತ್ತು. ಕಟೀಲಿನ 5 ನೇ ಮೇಳ ಹೊರಡುವ ಸಂದರ್ಭದಲ್ಲಿ ದೇವಿಪ್ರಸಾದ್ ಶೆಟ್ಟರು ಅಮ್ಮುಂಜೆಯವರನ್ನು 5ನೇ ಮೇಳದ ಒಂದನೇ ಪುಂಡುವೇಷಕ್ಕೆ ಭಡ್ತಿಗೊಳಿಸಿದರು . ಸದಾ ಜ್ಞಾನಾಕಾಂಕ್ಷಿಗಳಾದ ಅಮ್ಮುಂಜೆಗೆ 5ನೇ ಮೇಳ ಇನ್ನಷ್ಟು ಬೆಳೆಯಲು ಕಾರಣವಾಯಿತು. 5 ನೇ ಮೇಳದಲ್ಲಿ ಆ ಕಾಲದಲ್ಲಿ ಪ್ರಧಾನ ಭಾಗವತರಾಗಿದ್ದವರು ಸುಪ್ರಸಿಧ್ಧ ಯುವ , ಮಧುರಕಂಠದ ಭಾಗವತರಾದ ಪಟ್ಲ ಸತೀಶ ಶೆಟ್ಟರು . ಪಟ್ಲರು ಕುರಿಯರು ಕೆತ್ತಿದ ಅಮ್ಮುಂಜೆ ಎಂಬ ಶಿಲ್ಪಕ್ಕೆ ಹೊಳಪನ್ನು ನೀಡಿದರು.

ಪಟ್ಲರ ದಕ್ಷ ನಿರ್ದೇಶನದಲ್ಲಿ ಅಮ್ಮುಂಜೆಯವರ ಚಂಡ , ರೂಕ್ಷ , ಸುಧನ್ವ , ಜಾಂಬವ , ಮೈಂದ , ಹನೂಮಂತ ಮುಂತಾದ ಪಾತ್ರಗಳು ಹೊಸರೂಪ ತಳೆದವು . ಅಮ್ಮುಂಜೆಯವರು ವಿಜೃಂಭಿಸಲಾರಂಭಿಸಿದರು . ಹೀಗೆ 1991ರಿಂದ 2017 ವರೆಗೂ 26 ಸಾರ್ಥಕ ತಿರುಗಾಟವನ್ನು ಕಟೀಲು ಮೇಳ ಒಂದರಲ್ಲೇ ನಡೆಸಿದ ಮ್ಮುಂಜೆಯವರು ಈಗ 3 ವರ್ಷಗಳ ಬಳಿಕ ಪುನಃ ಕಟೀಲು ಮೇಳಕ್ಕೆ ಪಾದಾರ್ಪಣೆ ಮಾಡಿದ್ದಾರೆ . ಸದಾ ಅಧ್ಯಯನಶೀಲ ಗುಣ , ಹೊಸ ಚಿಂತನೆಯ ಪಾತ್ರಚಿತ್ರಣ, ಶಿಸ್ತುಬಧ್ಧ ಜೀವನ , ಹಿರಿಯರಲ್ಲಿರುವ ಭಕ್ತಿಭಾವ , ವಿನಯಶೀಲ ಗುಣ ಹಾಗೂ ನಿಷ್ಕಲಂಕ ವ್ಯಕ್ತಿತ್ವದ ಅಮ್ಮುಂಜೆ ಮೋಹನರು ಯಕ್ಷರಂಗಕ್ಕೆ ಒದಗಿ ಬಂದ ಭಾಗ್ಯ . ನಿಗರ್ವಿಯಾಗಿ, ಸಹಕಲಾವಿದರೊಂದಿಗೆ ಸ್ನೇಹದಿಂದಲೇ ವರ್ತಿಸಿ , ಹಿರಿಯ ಕಲಾವಿದರಲ್ಲಿ ಕಲಿತು , ಕಿರಿಯ ಕಲಾವಿದರಿಗೆ ಕಲಿಸುವ ಅಪೂರ್ವ ಗುಣ ಅಮ್ಮುಂಜೆಯವರಲ್ಲಿದೆ . ಆ ಕಾರಣದಿಂದಲೇ ಅವರು ಮೇಳದಲ್ಲಿ

” ಅಪರೂಪದ ಕಲಾವಿದ “ ಎಂದೇ ಗುರುತಿಸಿಕೊಂಡಿದ್ದಾರೆ. ಧರ್ಮಪತ್ನಿಯಾದ ಶ್ರೀಮತಿ ಶಶಿಕಲಾ ಹಾಗೂ ಮುದ್ದು ಮಕ್ಕಳಾದ ವೈಶಾಖ್ ಹಾಗೂ ವೈಷ್ಣವಿಯರೊಂದಿಗೆ ಕೌಸ್ತುಭ ದಲ್ಲಿ ಸುಖೀ ಜೀವನ ನಡೆಸುತ್ತಿರುವ ಅಮ್ಮುಂಜೆಯವರು ನಿಡ್ಲೆ ಗೋವಿಂದ ಭಟ್ಟರ” ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ “ ಯ ತಿರುಗಾಟದಲ್ಲಿ ಭಾರತದ ಉದ್ದಗಲಕ್ಕೂ ಪರಿಚಿತರಾಗಿದ್ದಾರೆ . ಯಕ್ಷಗಾನದ ವೇಷಭೂಷಣದ ತಯಾರಿಯಲ್ಲೂ ನಿಷ್ಣಾತರಾದ ಅಮ್ಮುಂಜೆಯವರು ಸಿಂಗಾಪುರ , ಕುವೈಟ್ , ಬೆಹ್ರೀನ್ ನಂಥಹ ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿ , ಅಲ್ಲೂ ಅಭಿಮಾನೀ ಬಳಗವನ್ನು ಹೊಂದಿದ್ದಾರೆ . ಅಣ್ಣನಾದ ಜನಾರ್ಧನ ಅಮ್ಮುಂಜೆಯವರ ಸಹಕಾರದಿಂದ ಉತ್ತಮ ಸಂಘಟಕರಾಗಿಯೂ ಹೆಸರು ಗಳಿಸಿ , ಕೆಲವು ವರ್ಷಗಳ ಹಿಂದೆ ಮಂಗಳೂರು ಪುರಭವನದಲ್ಲಿ ” ಮಹಾಭಾರತ ” ಯಕ್ಷಗಾನ ಪ್ರದರ್ಶನ ಏರ್ಪಡಿಸಿ , ಅಪಾರ ಪ್ರೇಕ್ಷಕ ಸಂದೋಹದಲ್ಲಿ ದಾಖಲೆ ನಿರ್ಮಿಸಿದ್ದರು . ಕಟೀಲು ಮೇಳದಲ್ಲೇ 25 ತಿರುಗಾಟ ಪೂರೈಸಿದ ಸಂದರ್ಭದಲ್ಲಿ ಕಟೀಲಿನಲ್ಲಿ ಜರುಗಿದ ಅಮ್ಮುಂಜೆ ರಜತ ಪರ್ವ ದಲ್ಲಿ ಅಮ್ಮುಂಜೆಯವರ ಅಭಿಮಾನಿಗಳು ಯಕ್ಷದ್ಯುಮಣಿ ಎಂಬ ಸಾರ್ಥಕ ಬಿರುದಿನೊಂದಿಗೆ ಅಮ್ಮುಂಜೆಯವರನ್ನು ಗೌರವಿಸಿದ್ದು ಉಲ್ಲೇಖನೀಯ .

ಅಮ್ಮುಂಜೆಯವರು ಇತ್ತೀಚೆಗೆ ತಾಳಮದ್ದಳೆ ಕೂಟಗಳಲ್ಲೂ ಮಿಂಚಲಾರಂಭಿಸಿದ್ದಾರೆ . ನಮ್ಮ ಮೂಡಬಿದಿರೆಯ ಯಕ್ಷೋಪಾಸನಂ ವಾರದ ಕೂಟದಲ್ಲಿ ಇತ್ತೀಚಿಗೆ ಅಮ್ಮುಂಜೆಯವರು ಸುಧನ್ವನಾಗಿ , ಮಹೇಶ್ ಕುಮಾರ್ ಸಾಣೂರರು ಪ್ರಭಾವತಿಯಾಗಿ ಭಾಗವಹಿಸಿದ್ದು , ಆ ಕೂಟವು ಚೆನ್ನಾಗಿ ಪ್ರಸ್ತುತಗೊಂಡಿತ್ತು . ಮೋಹನ್ ಕುಮಾರ್ ಅಮ್ಮುಂಜೆಯವರಿಗೆ ಶುಭವನ್ನು ಕೋರುತ್ತೇನೆ .

* ಎಂ.ಶಾಂತರಾಮ ಕುಡ್ವ

ಮೂಡಬಿದಿರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter