ಮೂಡುಬಿದಿರೆ: ಇತ್ತೀಚೆಗೆ ಗೋವಾದಲ್ಲಿ ಜರುಗಿದ ರಾಷ್ಟ್ರೀಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶೋಧನಾ ಕಂಚಿನ ಪದಕವನ್ನು ಪಡೆದಿದ್ದಾರೆ. ಪುತ್ತೂರು ತಾಲೂಕು ಕಾಣಿಯೂರು ಗ್ರಾಮದ ನಡುಬೈಲು ದರ್ಣಪ್ಪ ಪೂಜಾರಿ ಮತ್ತು ಯಶೋದ ದಂಪತಿಗಳ ಸುಪುತ್ರಿ ಶೋಧನಾ ಪ್ರಸ್ತುತ ಆಳ್ವಾಸ್ ಕಾಲೇಜು ಮೂಡುಬಿದ್ರೆಯ ಅಂತಿಮ ವಾಣಿಜ್ಯ ಪದವಿ ವಿದ್ಯಾಥರ್ಿನಿ.
ಇದೇ ವೇಳೆ ರಾಷ್ಟ್ರೀಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಪ್ರಸ್ತುತ ಆಳ್ವಾಸ್ ಕಾಲೇಜಿನ ಅಂತಿಮ ಕಲಾ ವಿಭಾಗದ ವಿದ್ಯಾರ್ಥಿನಿ ವಿಟ್ಲದ ಪ್ರಜ್ಞಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಮೂಲತಃ ವಿಟ್ಲ ಕಂಬಳಬೆಟ್ಟು ಗ್ರಾಮದ ಪಟ್ಲಮನೆ ನಿವಾಸಿ ಕೃಷ್ಣಪ್ಪ ಪೂಜಾರಿ ಮತ್ತು ಸುಮಿತ ದಂಪತಿಗಳ ಸುಪುತ್ರಿ.

ಗ್ರಾಮೀಣ ಪ್ರತಿಭೆಗಳ ಸಾಧನೆ:
ದ.ಕ.ಜಿ.ಪ.ಹಿ.ಪ್ರಾ ಶಾಲೆ ಚಾರ್ವಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿರುವ ಶೋಧನಾ ಪ್ರಾಥಮಿಕ ಹಂತದಲ್ಲಿ ಉತ್ತಮ ಕಬಡ್ಡಿ ಆಟಗಾರ್ತಿ . ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪದ್ಮನಾಭ ಈಕೆಯ ಪ್ರತಿಭೆಯನ್ನು ಗುರುತಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿಸಿದರು. ಕಲಿಕೆಯಲ್ಲೂ ಮುಂದಿದ್ದ ಈಕೆ ಕ್ರೀಡಾಪ್ರತಿಭೆಗಳಿಗೆ ನೀಡುವಂತಹ ಉಚಿತ ಶಿಕ್ಷಣದಡಿಯಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. ಸೆಪ್ಟೆಂಬರ್ನಲ್ಲಿ ಬ್ರಹ್ಮಾವರದಲ್ಲಿ ಜರುಗಿದ ರಾಜ್ಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ, ಅಕ್ಟೋಬರ್ನಲ್ಲಿ ಮೈಸೂರು ದಸರಾ ಉತ್ಸವ ಸಲುವಾಗಿ ಜರುಗಿದ ರಾಜ್ಯ ಚಾಂಪಿಯನ್ಶಿಪ್ನಲ್ಲೂ ಶೋಧನಾ ಚಿನ್ನದ ಪದಕವನ್ನು ಪಡೆದುಕೊಂಡ ಸಾಧಕಿ.
ಪದವಿ ಪೂರ್ವ ಕಾಲೇಜಿನಲ್ಲಿ ಆಳ್ವಾಸ್ ಕಬಡ್ಡಿ ತಂಡದ ನಾಯಕಿಯಾಗಿದ್ದು ಎರಡು ಬಾರಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಎರಡು ಬಾರಿ ಪ್ರತಿನಿಧಿಸಿದರು. ತದನಂತರ ವೇಯ್ಟ್ಲಿ ಲಿಫ್ಟಿಂಗ್ನಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡ ಶೋಧನಾ 53ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿ ಹಲವು ಜಿಲ್ಲಾ, ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದು ತಾನು ಕಲಿತ ಕಾಲೇಜಿಗೆ ಮತ್ತು ಊರಿಗೆ ಕೀತರ್ಿಯನ್ನು ತಂದಿದ್ದಾರೆ.
ಇದೇ ವೇಳೆ ಮತ್ತೋರ್ವ ಸಾಧಕಿ ಪ್ರಜ್ಞಾ ಸೆಪ್ಟೆಂಬರ್ ತಿಂಗಳಲ್ಲಿ ಬ್ರಹ್ಮಾವರದಲ್ಲಿ ಜರುಗಿದ ರಾಜ್ಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದು ಮೈಸೂರು ದಸರಾ ಉತ್ಸವದ ಪ್ರಯುಕ್ತ ಜರುಗಿದ ರಾಜ್ಯ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ವಿಟ್ಲ ತಾಲೂಕಿನ ಚಂದಳಿಕೆ ದ.ಕ.ಜಿ.ಪ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲದಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ಕೋಟದಡಿ ಉಚಿತ ಶಿಕ್ಷಣವನ್ನು ಪಡೆದು ಕಲಾ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ರಾಷ್ಟ್ರೀಯ ವೇಯ್ಟ್ಲಿಫ್ಟಿಂಗ್ ತರಬೇತುದಾರ ಪ್ರಮೋದ್ ಕುಮಾರ್ ಶೆಟ್ಟಿ ನೆಲ್ಯಾಡಿ ಇವರಿಂದ ತರಬೇತಿಯನ್ನು ಪಡೆಯುತ್ತಿರುವ ಇಬ್ಬರೂ ಕೂಡಾ ಮುಂದಿನ ಡಿಸೆಂಬರ್ನಲ್ಲಿ ರಾಜಸ್ತಾನದ ಉದಯಪುರದಲ್ಲಿಜರಗಲಿರುವ ರಾಷ್ಟ್ರೀಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅಭಿನಂದನೆ ಸಲ್ಲಿಸಿದ್ದಾರೆ.
