ಕೈಕಂಬ: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ರಿ) ಇದರ ವತಿಯಿಂದ ಅ. 30ರಂದು ಅಡ್ಡೂರು ಜಂಕ್ಷನ್ನಲ್ಲಿ ಸಾರ್ವಜನಿಕ ಸೇವೆಯ ಆ್ಯಂಬುಲೆನ್ಸ್ ವಾಹನ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.ಆಕ್ಸಿಜನ್ ಉಪಕರಣ ಹಾಗೂ ಇತರ ಸೇವೆಗಳು ಒಳಗೊಂಡಿರುವ ಸುಮಾರು 16 ಲಕ್ಷ ರೂ ವೆಚ್ಚದ ಈ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿದ ಪಣಂಬೂರು ಎಸಿಪಿ ಕೆ ಯು ಬೆಳ್ಳಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇದು ಅತ್ಯಂತ ಅಗತ್ಯ ಸೇವೆಯಾಗಿದ್ದು, ಸಂಸ್ಥೆಯ ಸೇವೆ ಇತರ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.
ಮಾಜಿ ಶಾಸಕ ಮೊೈದಿನ್ ಬಾವ ಮಾತನಾಡಿ, ಈ ಭಾಗದ ಬಡಬಗ್ಗರಿಗೆ ಆ್ಯಂಬುಲೆನ್ಸ್ ಸೇವೆ ಲಭಿಸಲಿ. ಇದೊಂದು ಸಮಾಜಮುಖಿ ಕೆಲಸ ಎಂದವರು, ಪೊಳಲಿ ದ್ವಾರದಿಂದ ಮುಂದುವರಿದ ರಸ್ತೆ ಅಭಿವೃದ್ಧಿಗೆ ಈ ಹಿಂದೆ ತೆಗೆದಿರಿಸಲಾದ ಮೊತ್ತದಲ್ಲಿ ಕಾಮಗಾರಿ ಆರಂಭಿಸಲು ಹಾಲಿ ಶಾಸಕರು ಮುತುವರ್ಜಿ ವಹಿಸಬೇಕು ಎಂದರು.
ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಅಡ್ಡೂರು ಪ್ರದೇಶದಲ್ಲಿ ಮನೆಮನೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ನೀಡಿದ ಡಾ. ಸಿದ್ಧಿಕಿ ಅವರನ್ನು ನೈಜ `ಕೊರೊನಾ ವಾರಿಯರ್’ ಎಂದು ಗುರುತಿಸಿ ಸನ್ಮಾನಿಸಲಾಯಿತು. ಎಸಿಪಿ ಬೆಳ್ಳಿಯಪ್ಪ ಹಾಗೂ ಕೊರೊನಾ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ನೂರಾರು ಭಾರತೀಯರನ್ನು ಉಚಿತವಾಗಿ ಭಾರತಕ್ಕೆ ಕಳುಹಿಸುವಲ್ಲಿ ಸಹಕರಿಸಿದ್ದ ಹಾಗೂ ನೂರಾರು ಭಾರತೀಯರಿಗೆ ಉದ್ಯೋಗ ನೀಡಿರುವ ಸೌದಿ ಉದ್ಯಮಿ ಕೆಟಿಎಂ ಅಬ್ದುಲ್ ರಜಾಕ್ ಕೆಳಗಿನಕೆರೆ ಅಡ್ಡೂರು ಅವರನ್ನು ಶಾಲು ಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಂ ಎಚ್ ಮೊೈದಿನ್(ಗೌರವಾಧ್ಯಕ್ಷ), ತಾಪಂ ಸದಸ್ಯ ಸಚಿನ್ ಅಡಪ, ಅಹ್ಮದ್ ಬಾವ ಅಂಗಡಿಮನೆ(ಅಧ್ಯಕ್ಷ, ಬಿಜೆಎಂ-ಅಡ್ಡೂರು), ಅಹ್ಮದ್ ಬಾವ(ಅಧ್ಯಕ್ಷ, ಬದ್ರುಲ್ ಹುದಾ ಜುಮಾ ಮಸೀದಿ, ಕಾಂಜಿಲಕೋಡಿ), ಕೆ ಇ ರಮ್ಲಾನ್(ಅಧ್ಯಕ್ಷ, ಬಾಬಾ ಫಕ್ರುದ್ಧಿನ್ ಜುಮಾ ಮಸೀದಿ, ಪೊಳಲಿ) ಮೊಹಮ್ಮದ್ ಶಾಫಿ(ಅಧ್ಯಕ್ಷ, ಆಯಿಷಾ ಮಸೀದಿ, ಅಡ್ಡೂರು), ಬಾಲಕೃಷ್ಣ ರಾವ್ ನೂಯಿ(ಅಧ್ಯಕ್ಷ, ಮುಖ್ಯಪ್ರಾಣ ದೇವಸ್ಥಾನ), ಬಜ್ಪೆ ಪೊಲೀಸ್ ಅಧಿಕಾರಿ ಸತೀಶ್, ಎ ಕೆ ಅಶ್ರಫ್ ಹಾಗೂ ಅಸೋಸಿಯೇಶನ್ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ ಶರೀಫ್ ದಾರಿಮಿ ಆಶೀರ್ವಚನ(ದುವಾ) ನೀಡಿದರು. ಅಸೋಸಿಯೇಶನ್ ಸಂಚಾಲನೆಯ ಅಡೂರಿನಲ್ಲಿರುವ ಸಹರಾ ಇಂಗ್ಲಿಷ್ ಮಾಧ್ಯಮ ಶಾಲಾ ಪ್ರಾಂಶುಪಾಲ ಕೇಶವ ಎಚ್ ಪ್ರಸ್ತಾವಿಕ ಮಾತನಾಡಿದರು. ಶಾಲೆಯ ಸಂಚಾಲಕ ಎ ಕೆ ಇಸ್ಮಾಯಿಲ್ ಸ್ವಾಗತಿಸಿದರು. ಶಿಕ್ಷಕ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
