ಬಂಟ್ವಾಳ:ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ಅ.20 ರಂದು ನಟ ಸುರೇಂದ್ರ ಭಂಡಾರಿ ಹತ್ಯೆಗೆ ಸಂಬಂದಿಸಿದಂತೆ ಬಂಧಿತ ಆರೋಪಿಗಳಿಬ್ಬರನ್ನು ಮಂಗಳವಾರ ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದ್ದು ಪೊಲೀಸರ ನಿವೇದನೆಯ ಮೇರೆಗೆ ನ್ತಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೊಪ್ಪಿಸಿದೆ. ಬಂಟ್ವಾಳ ತಾ.ನ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39 ) ಹಾಗೂ ಮಂಗಳೂರು ನೀರುಮಾರ್ಗ ಬೋಂಡಂತಿಲ ನಿವಾಸಿಗಿರೀಶ್ ( 28) ಎಂಬವರನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ತಲವಾರನ್ನು ವಶಪಡಿಸಿದ್ದು,ಹೆಚ್ಚಿನ ತನಿಖೆಯ ಹಿನ್ನಲೆಯಲ್ಲಿ ಪೊಲೀಸರ ನಿವೇದನೆಯನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳಿಬ್ಬರನ್ನು ಐದುದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ನಿರ್ದೇಶನದಲ್ಲಿ ಬಂಟ್ವಾಳ ಇನ್ಸ್ ಪೆಕ್ಟರ್ ನಾಗರಾಜ್ ರವರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಪಿ ಎಸ್ ಐ ಗಳಾದ ಅವಿನಾಶ್,ಪ್ರಸನ್ನ, ನಂದಕುಮಾರ್, ವಿನೋದ್, ರಾಜೇಶ್, ಕಲೈಮಾರ್, ಪಿಐ ರವಿ ಮತ್ತು ಡಿಸಿಐಬಿ ಸಿಬ್ಬಂದಿಗಳನ್ನು ಒಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿತ್ತು. ಭಾನುವಾರ ಕಾಸರಗೋಡಿನಿಂದ ಮುಡಿಪು ರಸ್ತೆಯಾಗಿ ಬಂಟ್ವಾಳಕ್ಕೆ ಬರುತ್ತಿದ್ದ ವೇಳೆ ಖಚಿತ ಮಾಹಿತಿಯನ್ವಯ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
