ಬಂಟ್ವಾಳ:ಜೀವನಕ್ಕೆ ಅವಶ್ಯ ಎನ್ನಿಸಿದ ಶಿಕ್ಷಣ ಮಕ್ಕಳಿಗೆ ಹೆಚ್ಚು ಪ್ರಿಯವಾಗಿರುತ್ತದೆ ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಶೈಕ್ಷಣಿಕ ಸಂವೇದನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂಪಿ ಹೇಳಿದ್ದಾರೆ.
ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತುದಿನಗಳ ಕಾಲ ಶಿಕ್ಷಕರಿಗಾಗಿ ನಡೆದ ಕಂಪ್ಯೂಟರ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಶೈಕ್ಷಣಿಕ ಪಠ್ಯಕ್ರಮದಲ್ಲಿ ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ಪ್ರತೀ ಹಂತದಲ್ಲೂ ಮಕ್ಕಳು ಉತ್ಸಾಹದ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣದ ಉದ್ದೇಶವನ್ನು ತಲುಪಲು ಸಾಧ್ಯ ಎಂದರು.
ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಮಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಇಲಾಖೆಯ ಸೂಚನೆಯಂತೆ ಹತ್ತು ದಿನಗಳ ತರಬೇತಿಯನ್ನು ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಆಸಕ್ತಿದಾಯಕ ವಾತಾವರಣ ನಿರ್ಮಿಸುವಲ್ಲಿ ಈ ತರಬೇತಿ ನೆರವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣ ಸಂಯೋಜಕಿ ಸುಶೀಲಾ ಅತಿಥಿಯಾಗಿದ್ದರು. ಪತ್ರಕರ್ತ ಮೌನೇಶ ವಿಶ್ವಕರ್ಮ, ಸಂಪನ್ಮೂಲ ವ್ಯಕ್ತಿ ಗಳಾದ ಜೋಯಲ್ ಲೋಬೋ, ಮಹೇಶ್ ಕುಮಾರ್ ವಿ.ಕರ್ಕೇರಾ, ಪೂರ್ಣಿಮ ಕರ್ಕೇರ, ಜೋಸ್ಲಿನ್ ಲವೀನಾ ವೇದಿಕೆಯಲ್ಲಿದ್ದರು.
ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದ ಶಿಕ್ಷಕರಾದ ಅಬೂಬಕ್ಕರ್ ಸಿದ್ದಿಕ್ ಕೊಡ್ಮಾಣ್, ಜಯಲಕ್ಷ್ಮಿ ಕಲ್ಲರಕೋಡಿ, ಅನಸೂಯ ಕಾಡುಮಠ, ಲವೀನಾ ಮೊಂಟೆಪದವು ಅನಿಸಿಕೆ ವ್ಯಕ್ತಪಡಿಸಿದರು. ಬೆಂಜನಪದವು ಕಲಾಶಿಕ್ಷಕ ದೇವದಾಸ್ ಸ್ವಾಗತಿಸಿದರು. ವಾಮದಪದವು ಶಿಕ್ಷಕಿ ವೈಲೆಟ್ ಲೆನ್ನಿ ಡಯಾಸ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

