ಬಂಟ್ವಾಳ: ಬಿ.ಸಿ.ರೋಡು ಸುಂದರೀಕರಣ ಯೋಜನೆಯ ಕಾಮಗಾರಿಗೆ ಸೋಮವಾರ ಚಾಲನೆ ದೊರೆತಿದ್ದು,ಆರಂಭಿಕ ಹಂತದಲ್ಲಿ ಫ್ಲೈಓವರ್ ತಳಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಾರ್ಕಿಂಗ್ ಕಾರ್ಯ ನಡೆಯಿತು. 
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಹತ್ವಾಂಕಾಂಕ್ಷೆಯ ಯೋಜನೆ ಇದಾಗಿದ್ದು, ಕಾಮಗಾರಿಗೆ ಶಂಕುಸ್ಥಾಪನೆ ಬಳಿಕ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ವಿಳಂಬಗೊಂಡಿತ್ತು. ಇದೀಗ ಇಂಟರ್ಲಾಕ್ ಹಾಕುವುದು, ರಸ್ತೆ ಅಭಿವೃದ್ಧಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗ ಸರ್ಕಲ್ ನಿರ್ಮಾಣ ಹೀಗೆ ಹಲವು ಯೋಜನೆಗಳು ಖಾಸಗಿ ಸಂಸ್ಥೆಗಳ ಸಿಎಸ್ ಆರ್ ಫಂಡ್, ಸರ್ಕಾರದ ಅನುದಾನ ಸಹಿತ ನಗರ ಯೋಜನಾ ಪ್ರಾಧಿಕಾರದ ಸಹಕಾರದೊಂದಿಗೆ ನಡೆಯಲಿವೆ.
ಶಾಸಕ ರಾಜೇಶ್ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು.ಸುಮಾರು 15 ಕೋ.ರೂ.ವೆಚ್ಚದಲ್ಲಿ ಬಿ.ಸಿ.ರೋಡಿನ ಕೈಕಂಬದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ವರೆಗೆ ಸುಂದರೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ.
