ಉಜಿರೆ: ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿಸೋಮವಾರ ಬೆಳಗ್ಗೆ ತುಲಾ ಲಗ್ನ ಸುಮುಹೂರ್ತದಲ್ಲಿ ಆನೆಮರಿಗೆ `ಶಿವಾನಿ’ ಎಂದು ನಾಮಕರಣ ಮಾಡಲಾಯಿತು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಅವರು ಆನೆ ಮರಿಗೆ ಪ್ರಸಾದ ಹಾಕಿ, ಗಂಟೆ ಕಟ್ಟಿದ ಬಳಿಕ ನಾಮಕರಣ ಶಾಸ್ತ್ರ ನಡೆಸಲಾಯಿತು. ಹೆಗ್ಗಡೆಯವರ ಮೊಮ್ಮಗಳು ಮಾನ್ಯ `ಶಿವಾನಿ’ ಹೆಸರನ್ನು ಪ್ರಕಟಿಸುವ ಮೂಲಕ ಆನೆ ಮರಿಗೆ ನಾಮಕರಣ ಮಾಡಲಾಯಿತು.
ಬಳಿಕ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳದಲ್ಲಿ ಜಾತ್ರೆ, ಉತ್ಸವ ಮೆರವಣಿಗೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಜ ಸೇವೆಯನ್ನು ಬಳಸುವುದುಸಂಪ್ರದಾಯವಾಗಿದೆ.ಈಗಾಗಲೇ ಲತಾ ಮತ್ತು ಲಕ್ಷಿ ್ಮ ಎಂಬ ಎರಡು ಆನೆಗಳಿದ್ದು, 2020 ರ ಜುಲೈ 1ರಂದು ಬುಧವಾರ ಲಕ್ಷ್ಮಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.ಶಿವನ ಸನ್ನಿಧಿಯ ಆಶ್ರಯದಲ್ಲಿ ಇರುವುದರಿಂದ ಅದಕ್ಕೆ `ಶಿವಾನಿ’ ಎಂದು ನಾಮಕರಣ ಮಾಡಲಾಗಿದೆ.
ಧರ್ಮಸ್ಥಳದಲ್ಲಿರುವ ಆನೆಗಳಿಗೆ ವನ ಸಂಚಾರಕ್ಕೂ ಅವಕಾಶವಿದ್ದು, ಪ್ರಾಕೃತಿಕವಾಗಿ ದೊರಕುವ ಸೊಪ್ಪು, ಹಣ್ಣುಹಂಪಲುಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಧರ್ಮಸ್ಥಳದ ಇತಿಹಾಸದಲ್ಲಿ ಗಜಪ್ರಸವ ಹಾಗೂ ನಾಮಕರಣ ನೂತನ ಕಾರ್ಯಕ್ರಮವಾಗಿದೆ. ಬಳಿಕ `ಶಿವಾನಿ’ ನೀರಾಟದ ತುಂಟಾಟ ಪ್ರೇಕ್ಷಕರ ಕಣ್ಮನ ಸೆಳೆಯಿತು. ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ.ಯಶೋವರ್ಮ, ಶ್ರದ್ದಾ ಅಮಿತ್, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.
