ಪೊಳಲಿ: ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ, ಇದರಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೇಳಿಕೊಳ್ಳುವ ಸಂಕಷ್ಟ ಎದುರಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚುವರಿಯಾಗಿ ಹೇರಳ ಕೃಷಿ ಚಟುವಟಿಕೆ ನಡೆದಿದೆ ! ಅಂತೆಯೇ ಈ ಸೀಸನ್‌ನಲ್ಲಿ ಅಡಕೆ ಮತ್ತು ತೆಂಗು ಕೃಷಿಗೆ ಕೂಲಿಯಾಳುಗಳ ಕೊರತೆ ಕಂಡು ಬಂದಿಲ್ಲ. ಮಳೆಗಾಲದಲ್ಲಿ ತೆಂಗು, ಕಂಗು, ಬಾಳೆ ತೋಟಗಳಿಗೆ ಸಾಮಾನ್ಯವಾಗಿ ಕೀಟಬಾಧೆ ತಟ್ಟುತ್ತದೆ. ಈಗ ಎಲ್ಲಾದರೂ ಒಂದಷ್ಟು ಬಿಸಿಲು ಬಂದಾಗ ಕೃಷಿಕರು ತೋಟಗಳಿಗೆ ಕೀಟನಾಶಕ ಸಿಂಪಡಿಸುತ್ತಾರೆ. ಹಳ್ಳಿಗಳಲ್ಲಿ ಇಂತಹ ಕೆಲಸದಲ್ಲಿ ಪರಿಣತರು ಇರುತ್ತಾರೆ. ಅವರಲ್ಲಿ ಪೊಳಲಿಗೆ ಹತ್ತಿರದ ಮಣಿಕಂಠಪುರದ ಆನಂದ ಪೂಜಾರಿಯೂ ಒಬ್ಬರು.

ಶ್ರಮಜೀವಿ ಆನಂದ ಅವರು ಬಾಲ್ಯದಿಂದಲೇ ತನ್ನ ತಂದೆ (ದಿ. ಶಿವಪ್ಪ ಪೂಜಾರಿ) ಮತ್ತು ಸಹೋದರನ ಜೊತೆಯಲ್ಲೇ ತಾಳೆ ಮತ್ತು ತೆಂಗಿನ ಮರದಿಂದ ಶೇಂದಿ(ಕಳ್ಳು) ತೆಗೆಯುವ ಕಲೆ ಕರಗತ ಮಾಡಿಕೊಂಡಿದ್ದಾರೆ. ತಂದೆ ನಿಧನದ ಬಳಿಕ ಇವರು ಶೇಂದಿಯ ಜೊತೆ ಜೊತೆಗೆ ಮಳೆಗಾಲದ ಬಿಸಿಲ ಅವಧಿಯಲ್ಲಿ ಕಂಗಿನ ತೋಟಗಳಿಗೆ ಕೀಟನಾಶಕ ಸಿಂಪಡಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ.
ಮೇ ತಿಂಗಳವರೆಗೆ ತಾಳೆ ಮರದಿಂದ ಶೇಂದಿ ತೆಗೆದರೆ, ಜೂನ್ ಬಳಿಕ ಮತ್ತೊಂದು ಸೀಸನ್‌ವರೆಗೆ ತೆಂಗಿನ ಮರದಿಂದ ಸೇಂದಿ ತೆಗೆಯುತ್ತಾರೆ. ಸೇಂದಿಯ ಜೊತೆಗೆ ಉಪ-ಕಸುಬಾಗಿ ಅಡಕೆ ತೋಟಗಳಿಗೆ ಹಳೆಯ ಮಾದರಿಯಲ್ಲಿ ಕೀಟನಾಶಕ ಸಿಂಪಡಿಸುತ್ತಾರೆ. ಈ ಕೆಲಸಕ್ಕಾಗಿ ಇವರು ಮತ್ತೊಬ್ಬರ ಸಹಾಯ ಪಡೆಯುತ್ತಾರೆ.

ಸಾವಿರ ತೆಂಗಿನ ಗಿಡಗಳಿಗೆ ಕೀಟನಾಶಕ ಸಿಂಪಡಿಸಿದರೆ 3000 ರೂ ಪಡೆಯುವ ಇವರು ದಿನಕ್ಕೆ ಅಂದಾಜು5,000 ರೂ ಸಂಪಾದಿಸುತ್ತಾರೆ. ಈಗ ಈ ಕೆಲಸಕ್ಕೆ ಹಲವು ಭಾಗದಿಂದ ಮೊಬೈಲ್ ಕರೆ ಬರುತ್ತದೆ ಮಳೆಗಾಳದಲ್ಲಿ ಬೇಡಿಕೆ ಇದೆ. ಅಮ್ಮುಂಜೆ, ಪೊಳಲಿ, ಕರಿಯಂಗಳ, ಮಳಲಿ, ಬಡಗಬೆಳ್ಳೂರು, ಮುಡಾಯಿಕೋಡಿ, ಕೂರಿಯಾಳ ಅಡ್ಡೂರು, ಮಣಿಕಂಠಪುರ ಮೊದಲಾದ ಕಡೆಗಳಲ್ಲಿ ತೆಂಗಿನ ತೋಟಗಳಲ್ಲಿ ಕೀಟನಾಶಕ ಸಿಂಪಡಣೆಯಲ್ಲಿ ನಿರತರಾಗಿರುತ್ತಾರೆ.

ಕೀಟನಾಶಕ ತಯಾರಿ :
ಒಂದು ಸಾವಿರ ಅಡಕೆ ಮರಕ್ಕೆ ಸಾಂಪ್ರದಾಯಿಕ ಕೀಟನಾಶಕ ಸಿಂಪಡಿಸಬೇಕಿದ್ದರೆ, 4 ಕಿಲೋ ಮೈಲುತುತ್ತು ಮತ್ತು 14 ಕಿಲೋ ಸುಣ್ಣವನ್ನು ನೀರಿನಲ್ಲಿ ಮಿಶ್ರಣ ಮಾಡಬೇಕಾಗುತ್ತದೆ. ಈ ಮಿಶ್ರಣಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಕಹಿಬೇವಿನ ಎಣ್ಣೆ ಮತ್ತು ಗಮ್ ಸೇರಿಸಿ ಕಲಸಬೇಕು. ಹೀಗೆ ಕಲಸಿದ ರಾಸಾಯನಿಕವನ್ನು ಪಂಪ್ ಮೂಲಕ ಅಡಕೆ ಗಿಡಗಳಿಗೆ ಸಿಂಪಡಿಸಬೇಕಾಗುತ್ತದೆ. ಈ ಕೆಲಸದ ವೇಳೆ ಒಬ್ಬ ಮರವೇರಿದರೆ ಮತ್ತೊಬ್ಬ ರಾಸಾಯನಿಕ ಪಂಪ್ ಮಾಡಬೇಕಾಗುತ್ತದೆ.
ಮರವೇರಿದ ವ್ಯಕ್ತಿ ಒಂದು ಅಡಕೆ ಮರದಲ್ಲೇ ಇದ್ದುಕೊಂಡು ಸುತ್ತಲ 12 ಇತರ ಮರಗಳಿಗೆ ರಾಸಾಯನಿಕ ಸಿಂಪಡಣೆ ಮಾಡುತ್ತಾರೆ. ಹೀಗೆ ಕೆಲವೇ ತಾಸಿನೊಳಗೆ ಸಾವಿರ ಗಿಡಗಳಿಗೆ ಕೀಟನಾಶಕ ಸಿಂಪಡಣೆ ಸಾಧ್ಯವಾಗುತ್ತದೆ ಎಂದು ಆನಂದ ಪೂಜಾರಿ ಹೇಳುತ್ತಾರೆ.
