ಕಳೆದ ಮಳೆಗಾಲ ಮುಗಿಯುತ್ತಲೇ, 2020ರ ಹೊಸ ವರ್ಷಕ್ಕೆ ಎಂದಿನಂತೆ ಮದುವೆ-ಮುಂಜಿ, ಜಾತ್ರೆ, ಉತ್ಸವ, ಕೋಲ-ಧರ್ಮನೇಮ, ಬ್ರಹ್ಮಕಲಶ, ನಾಗಮಂಡಲಗಳು ನಡೆಯಲಿದೆ ಎಂದುಕೊಂಡು, `ಉದ್ಯಮ ಲೋಕ’ವೊಂದು ವಿಶೇಷ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲೇ, ಮನುಕುಲವನ್ನೇ ಹಿಪ್ಪೆ ಹೀರೆಕಾಯಿ ಮಾಡುವಂತಹ ಕೊರೊನಾ ಎಂಬ ಮಹಾಮಾರಿ ಧರೆಗಪ್ಪಳಿಸಿದೆ. ಪರಿಣಾಮ, ಎಲ್ಲರ ಸಕಲ ಸಿದ್ಧತೆಗಳಿಗೆ ತಣ್ಣೀರೆರಚಿದಂತಾಗಿದೆ. ಚೀನಾದಿಂದ ವಿಶ್ವ ರಾಷ್ಟ್ರಗಳಿಗೆ ಕಬಂಧ ಬಾಹು ಚಾಚಿದ ಕೊರೊನಾ ವೈರಸ್ ಕ್ರಮೇಣ ಭಾರತಕ್ಕೂ ಲಗ್ಗೆ ಇಟ್ಟಿದೆ. ತಿಂಗಳು ನಾಲ್ಕಾಯಿತು, ಕೊರೊನಾ-ಕೋವಿಡ್ ಸಾಂಕ್ರಾಮಿಕ ವೈರಸ್‍ಗೆ ಔಷಧಿ-ಲಸಿಕೆ ಬಂದಿಲ್ಲ. ಈಗ ಮದುವೆ ಸಂಭ್ರಮವಿಲ್ಲ, ಕೋಲದ ತಾಸೆನಾದ-ತಾಳವಿಲ್ಲ ; ಕುಣಿತವಿಲ್ಲ. ಬದುಕಿದರೆ ಭಿಕ್ಷೆ ಬೇಡಿಯಾದರೂ…ಭವಿಷ್ಯ ಕಟ್ಟಿಕೊಳ್ಳುವೆ ಎನ್ನುವಂತಾಗಿದೆ ನರಜನ್ಮ ! ಜೀವನಶೈಲಿಯಲ್ಲಿ `ಸಂಭ್ರಮ’ ಕ್ಷಣಿಕ ಮಾತ್ರ ಎಂಬುದು ಈಗಲಾದರೂ ಮನವರಿಕೆಯಾಗಿರಬಹುದು. ಆದರೂ ನಾವು ಬದುಕುತ್ತಿದ್ದೇವೆ.
ದೂರ ಸರಿದ ಅದ್ದೂರಿ…
ಈಗ ಎಲ್ಲರಲ್ಲೂ ಸಹಜವಾಗಿಯೇ ಪ್ರಾಣ ಭಯ ಕಾಡಲಾರಂಭಿಸಿದೆ. ಒಂದೇ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಒಂದೇ ಕಾಯಿಲೆಗೆ ಸತ್ತಿದ್ದಾರೆ ಎಂದರೆ ಭಯ ಇಲ್ಲದಿರುತ್ತದೆಯೇ ? ಭಯದ ಬಗ್ಗೆ ಇನ್ನೊಬ್ಬರು ವಿವರಿಸಿ ಹೇಳುವುದಕ್ಕಿಂತಲೂ, ವೈಯಕ್ತಿಕ ಅನುಭವ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಮನೋವಿಜ್ಞಾನ ಹೇಳುವುದೇ ಇದನ್ನೇ ? ಇದೇ ಕಾರಣಕ್ಕೆ ನಗರ-ಪಟ್ಟಣಗಳಂತೆ ಹಳ್ಳಿಗಳಲ್ಲೂ ವೈಭವೋಪೇತ ಕಾರ್ಯಕ್ರಮಗಳಿಗೆ ಅಮಾವಾಸ್ಯೆಯ ಕರಿಛಾಯೆ ವ್ಯಾಪಿಸಿ, ಕಷಾಯಕ್ಕೆ ಮಹತ್ವ ಬಂದಿದೆ. 60-70 ವರ್ಷಗಳ ಹಿಂದೆ `ಉಳ್ಳವರ ಚಾವಡಿ’ಯಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಸಂಭ್ರಮೋಲ್ಲಾಸದ ಕ್ಷಣಗಳು, ನೇಮೋತ್ಸವಗಳು, ಮಂಡಲ-ಸಿರಿಮಂಡಲಗಳು, ಉತ್ಸವ, ಹಬ್ಬ-ಹರಿದಿನಗಳು ವರ್ಷಗಳು ಉರುಳುತ್ತಲೇ ಹಳ್ಳಿಗಳಲ್ಲೂ ಕಾಣುವಂತಾಯಿತು. ಹಳ್ಳಿಗರಲ್ಲೂ ಕುರುಡು ಕಾಂಚಾಣ ಹಾಸುಹೊಕ್ಕಾಗಿರುವುದು ಇದಕ್ಕೆ ಮುಖ್ಯ ಕಾರಣ. ಎಲ್ಲೆಡೆ ಕೊರೊನಾ ಮನೆ ಮಾಡುವುದಕ್ಕಿಂತ ಕೆಲವು ತಿಂಗಳ ಹಿಂದಿನವರೆಗೂ ನಾವು ನೋಡುತ್ತಿದ್ದ ಗೌಜಿ-ಗದ್ದಲ, ಅದ್ದೂರಿ, ಸಂಭ್ರಮದ ಕ್ಷಣಗಳಿಂದ ಈ ಜಗದಲಿ ಸಿರಿವಂತರು, ಬಡವರ ಮಧ್ಯೆ ತಾಳೆಹಾಕುವುದೇ ಕಷ್ಟವಾಗಿತ್ತು. ಸದ್ಯ ಅದ್ದೂರಿ, ಸಂಭ್ರಮ ಪದಗಳಿಗೆ ಬ್ರೇಕ್ ಬಿದ್ದು, ಲಾಕ್‍ಡೌನ್, ಕೊರೊನಾ, ಸೀಲ್‍ಡೌನ್, ಕೋವಿಡ್-19, ಕ್ವಾರಂಟೈನ್, ಕಂಟೇನ್ಮೆಂಟ್ ಝೋನ್ ಪದಗಳಿಗೆ ಹೆಚ್ಚು ಪ್ರಾಶಸ್ತ್ಯ ಒದಗಿ ಬಂದಿದೆ. ಈ ಪದಗಳ ವಿಪರೀತ ಬಳಕೆಯ ಸುದ್ದಿಗಳಿಂದ ಜನ ಭಯಭೀತರಾಗಿದ್ದಾರೆ.
ಮಸಣದ್ದೇ ಸುದ್ದಿ…
ಪ್ರತಿಯೊಂದು ಚಾನೆಲ್‍ನಲ್ಲೂ ಈಗ ದಿನದ 24 ತಾಸು ಕೊರೊನಾ ರಣಕೇಕೆ, ಮರಣ ಮೃದಂಗ, ರಕ್ಕಸ-ರಾಕ್ಷಸ ಎಂಬ ಅಸಂಗತ ಪದಗಳ ಜೊತೆಗೆ ಈ ಸಾಂಕ್ರಾಮಿಕ ರೋಗದಿಂದ ಸತ್ತವರು ಮತ್ತು ಸೋಂಕಿತರ ಸಂಖ್ಯೆ ನೋಡುವಂತಾಗಿದೆ. ಇದರೊಟ್ಟಿಗೆ ಅಂತ್ಯಕ್ರಿಯೆಯ ಭೀಕರ ದೃಶ್ಯಗಳು. ಇದನ್ನೆಲ್ಲ ಗಮನಿಸಿದಾಗ ಪ್ರಸಕ್ತ ಸುದ್ದಿ ಚಾನೆಲ್‍ಗಳಿಗೆ ಕೋವಿಡ್-19, ಕೊರೊನಾ, ಕ್ವಾರಂಟೈನ್ ಚಾನೆಲ್ ಎಂದು ಪುನರ್‍ನಾಮಕರಣ ಮಾಡಬಹುದೇನೋ ಅನ್ನಿಸುತ್ತಿದೆ. ಡಿ.ಡಿ ಹೊರತುಪಡಿಸಿ ಉಳಿದೆಲ್ಲ ಸುದ್ದಿ ಚಾನೆಲ್‍ಗಳಲ್ಲಿ ಭೀತಿ ಹುಟ್ಟಿಸುವ ಸುದ್ದಿಗಳು ಪ್ರಸಾರವಾಗುತ್ತಿವೆ. ಬೇಡವೆಂದರೂ ಸುದ್ದಿ ನೋಡುವ ಮಂದಿ ಇಂತಹ ಸುದ್ದಿಗಳಿಂದ ಮಾನಸಿಕವಾಗಿ ನೊಂದುಕೊಳ್ಳುವುದೇ ಹೆಚ್ಚು. ಪರಿಣಾಮ, ಸಂಕುಚಿತ ಅಥವಾ ದುರ್ಬಲ ಮನಃಸ್ಥಿತಿಯ ಮಂದಿಯಲ್ಲಿ ಮಾನಸಿಕ ಭೀತಿ, ಒತ್ತಡ, ಖಿನ್ನತೆ ಹೆಚ್ಚಾಗಿ, ಮೊದಲೇ ಆ ವ್ಯಕ್ತಿಯಲ್ಲಿರಬಹುದಾದ ಸಾಮಾನ್ಯ ಅಥವಾ ಮಾರಣಾಂತಿಕ ಕಾಯಿಲೆಗಳು(ಜ್ವರ, ತಲೆಶೂಲೆಯಿಂದ ಹಿಡಿದು ಕ್ಯಾನ್ಸರ್, ಹೃದಯ ಮತ್ತು ಶ್ವಾಸಕೋಶ ಸಂಬಂಧಿ ರೋಗಗಳು) ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಸುದ್ದಿ ಚಾನೆಲ್‍ಗಳಿಗೆ ಒಂದಷ್ಟು ದಿನ ಬಿಡುವು ನೀಡಿದರೆ ಸಾಕಷ್ಟು ಜನರ ಮಾನಸಿಕ ತುಮುಲ ಕಡಿಮೆಯಾಗಿ ಆರೋಗ್ಯವಂತರಾಗಿರಲು ಸಾಧ್ಯವಿದೆ. ಭಯದಿಂದ ಸತ್ತರು ಹಲವರು.
ಇನ್ನು ಹಿಂದೆಯೇ ಹೇಳಿದಂತೆ ಈ ವರ್ಷ(2020) ಮದುವೆಗಳ ಬದಲಾಗಿ ಮಸಣದ, ಅಪಥ್ಯವೆನಿಸಿದ ಸುದ್ದಿಗಳಿಗೆ ಮಾತ್ರ ಸೀಮಿತವಾಗಿದೆ. ಸಂಭ್ರಮ, ಸಡಗರವಿಲ್ಲ. ಆದರೆ ಇದರಿಂದ ಮನುಕುಲವು ಸರಿಯಾದ ಪಾಠವೊಂದು ಕಲಿಯುತ್ತಿದೆ ಎಂದರೆ ತಪ್ಪಾಗಲಾರದು. ಮದುವೆಗೆ 50 ಮಂದಿ, ಸಾವಿಗೆ 25 ಮಂದಿ, ಸಭೆ ಸೇರುವಂತಿಲ್ಲ ಈ ನಿಯಮದಡಿ ಬದುಕುವುದು ಈವರೆಗೆ ವೈಭವೋಪೇತ ಜೀವನ ನಡೆಸಿದವರಿಗೆ ಕಿರಿಕಿರಿ ಎನ್ನಿಸಿದರೂ, ಭವಿಷ್ಯದಲ್ಲಿ ಇದೇ ಕಡ್ಡಾಯವಾದಲ್ಲಿ ಖಂಡಿತವಾಗಿಯೂ ದೇಶದಲ್ಲಿ `ಬಡತನ ರೇಖೆ’ ಇಳಿಮುಖವಾಗಲಿದೆ. ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದಂತಾಗಿರುವುದು ತಪ್ಪಲ್ಲ. ಇದು ಮನುಷ್ಯ ತನ್ನ ಸ್ಥಿತಿಗತಿಯ ಮೇಲೆ ನಿಯಂತ್ರಣ ಹೇರಲು ಕೋರೊನಾ ಕಲಿಸಿದ ಪಾಠವಲ್ಲವೇ ? ಅಂದ ಮಾತ್ರಕ್ಕೆ, ಕಳೆದ ಮೂರ್ನಾಲ್ಕು ತಿಂಗಳಲ್ಲಿ ಮದುವೆಗಳು ನಡೆದಿಲ್ಲ ಎಂದರ್ಥವಲ್ಲ. ಅವು ಸರಳವೂ, ಸುಂದರವೂ ಆಗಿತ್ತು.
ಇಷ್ಟೆಲ್ಲ ಹೇಳಿದ ಬಳಿಕವೂ ಕೊರೊನಾಕ್ಕೆ ಕೊಲ್ಲುವ ಶಕ್ತಿ ಇಲ್ಲವೇ ಇಲ್ಲ. ಮೊದಲೇ ರೋಗಗ್ರಸ್ಥರಾಗಿರುವ ಮಂದಿಗೆ ಈ ವೈರಸ್ ಅಂಟಿಕೊಂಡಾಗ ಮಾತ್ರ ರೋಗದ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಕೊನೆಗೆ ರೋಗ ನಿರೋಧಕ ಶಕ್ತಿ ಕ್ಷೀಣಿಸುವಂತೆ ಮಾಡಿ ಮನುಷ್ಯನ ಸಾವಿಗೆ ಕೊರೊನಾ ವೈರಸ್ ಕಾರಣವಾಗುತ್ತದೆ. ಆದ್ದರಿಂದಲೇ, ಆರಂಭದಲ್ಲಿ ಪ್ರಚಾರದಲ್ಲಿದ್ದಂತೆ ಕೊರೊನಾ ಕೊಲ್ಲುತ್ತದೆ ಎಂದರೆ ಈಗ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಆಸ್ಪತ್ರೆಗಳಿಗೆ ಹೋದರೆ ಗುಣಮುಖವಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಾಸ್ತವ. ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಜೀವನ ಪರ್ಯಂತ ಕೊರೊನಾ ವೈರಸ್‍ನಿಂದ ಪಾರಾಗಬಹುದು. ಭಯ ಬೇಡ ಎಂದರೂ, ಪ್ರಸಕ್ತ ಮಸಣದ ಸುದ್ದಿಗಳಿಂದ ಮಾನಸಿಕವಾಗಿ ದುರ್ಬಲರಾಗುವವರ ಸಂಖ್ಯೆ ಹೆಚ್ಚು. ಆದ್ದರಿಂದ, ಇತರರು ಏನೇ ಹೇಳಲಿ, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಧ್ಯೆರ್ಯ ಹೆಚ್ಚಿಸಿಕೊಂಡು ಬದುಕಲು ಕಲಿಯಬೇಕು. ಈ ಸಂದರ್ಭದಲ್ಲಿ ಪುತ್ತೂರಿನ ವರದಿಗಾರ ಗುರುಮೂರ್ತಿ ಮತ್ತು ಶಾಸಕ ಡಾ. ಭರತ್ ಶೆಟ್ಟಿ ಹೇಳಿರುವ “ಕೊರೊನಾದಿಂದ ಮುಕ್ತರಾಗಲು ಎಲ್ಲರೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ” ಎಂಬ ಭರವಸೆಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಅಂತೆಯೇ ಡಾ. ಬಿ ಎಂ ಹೆಗ್ಡೆ ಹೇಳಿರುವಂತೆ, “ಇದೊಂದು ಮಾರಕ ವೈರಸ್ಸೂ ಅಲ್ಲ, ರೋಗವೂ ಅಲ್ಲ. ಮನೆ ಮದ್ದಿನಿಂದ, ಮಾಸ್ಕ್, ಅಂತರ ಇಟ್ಟುಕೊಳ್ಳುವುದರಿಂದ ರೋಗ ತಡೆಗಟ್ಟಲು ಸಾಧ್ಯವಿದೆ. ಕೊರೊನಾದಿಂದ ನಿಮ್ಮನ್ನು ಯಾರೂ ರಕ್ಷಿಸುವುದಿಲ್ಲ, ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕು” ಎಂಬ ಮಾತು ಪ್ರತಿಯೊಬ್ಬರಿಗೂ ಪಥ್ಯವಾಗಬೇಕು. ಕೊರೊನಾದಿಂದ ಮನುಕುಲಕ್ಕೆ ಎಷ್ಟು ನಷ್ಟವಾಗಿದೆಯೋ ಅಷ್ಟೇ ಲಾಭವೂ ಆಗಿದೆ ಎಂಬ ವಿಷಯ ನಿಮಗೆ ಅರಿವಾದಾಗ ನಿಮ್ಮಲ್ಲಿ ಸ್ವಯಂ ಧೈರ್ಯ ಹೆಚ್ಚುತ್ತದೆ.
ಬರೆಹ : ಧನ್ಯಶ್ರೀ
