ಬಂಟ್ವಾಳ: ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ಯೋರ್ವರಿಗೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟುವಿನಲ್ಲಿ ಗುರುವಾರ ಸಂಭವಿಸಿದೆ.

ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಿಂದ ಕಾರ್ಯ ನಿರ್ವಹಿಸುತ್ತಿರುವ ಮಮತಾ ಗಟ್ಟಿ ಅವರಿಗೆ ಮಜಲು ನಿವಾಸಿ ಕಾಂತಪ್ಪ ಪೂಜಾರಿ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ಮಮತಾ ಅವರು ಕರ್ತವ್ಯದಲ್ಲಿರುವಾಗ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ, ಪರಿಣಾಮ ಅವರ ತಲೆಗೆ, ಕೈಗೆ ಏಟಾಗಿದೆ. ತತ್ ಕ್ಷಣ ಅವರನ್ನು ವಾಮದಪದವು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ವಾಮದ ಪದವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ಅಡ್ಯಂತಾಯ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
