ಬಂಟ್ವಾಳ: ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಾಮಾಜೆ ಕ್ರಾಸ್ ಬಳಿ ನಿರ್ಮಾಣಗೊಂಡಿರುವ ಪಂಪುಹೌಸಿನ ಛೇಂಬರ್ನಲ್ಲಿ ನೀರು ನಿಂತು ಅರ್ಥಿಂಗ್ ಸಮಸ್ಯೆ ಎದುರಾಗುತ್ತಿದೆ.ಹೊರಭಾಗದಲ್ಲಿರುವ ಛೇಂಬರ್ನಲ್ಲಿ ನೀರು ನಿಂತು ಅದು ಪಂಪುಹೌಸಿನ ಒಳಭಾಗದಿಂದ ಹೊರಕ್ಕೆ ಬರುವ ಪೈಪಿನ ಮೂಲಕ ನೀರು ಒಳಕ್ಕೆ ಪ್ರವೇಶಿಸಿ, ಪಂಪಿನ ಗೇಟ್ವಾಲ್ ತಿರುಗಿಸುವ ವೇಳೆ ಅರ್ಥ್ ಆಗುತ್ತಿದ್ದು, ಹೀಗಾಗಿ ಸಿಬಂದಿ ಹೆದರುತ್ತಿದ್ದಾರೆ. ಛೇಂಬರ್ನಿಂದ ಹೊರಕ್ಕೆ ಹೋಗುವ ನೀರಿನ ಪೈಪು ಬ್ಲಾಕ್ ಆಗಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಜಕ್ರಿಬೆಟ್ಟುನಲ್ಲಿ ನದಿಯಿಂದ ಲಿಫ್ಟ್ ಆದ ನೀರು ಶುದ್ಧೀಕರಣಗೊಂಡು ಇಲ್ಲಿನ ಟ್ಯಾಂಕ್ಗೆ ಬರುತ್ತದೆ. ಬಳಿಕ ಇಲ್ಲಿಂದ ಮೈರಾನ್ಪಾದೆ ಹಾಗೂ ಕುರ್ಸುಗುಡ್ಡೆ ಪ್ರದೇಶಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಈ ರೀತಿ ನೀರು ನಿಂತಾಗ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಸ್ಥಳೀಯರ ಆರೋಪವಾಗಿದೆ.
ಇಲ್ಲೇ ಪಕ್ಕದಲ್ಲಿ ಶೌಚಾಲಯವೊಂದು ನಿರ್ಮಾಣವಾಗಿದ್ದು, ಅದಕ್ಕೆ ಹೊಂಡವೇ ಇಲ್ಲ. ಜತೆಗೆ ಆವರಣ ಗೋಡೆಯಾಗಲಿ, ವಿದ್ಯುತ್ ಟ್ರಾನ್ಸ್ ಫಾರ್ಮರ್ನ ಸುತ್ತ ಪೊದೆ ತೆರವು ಕಾಮಗಾರಿ ನಡೆದಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.ನೀರು ನಿಲ್ಲುತ್ತಿರುವ ಕುರಿತು ಸ್ಥಳೀಯರು ಕರೆ ಮಾಡಿ ತಿಳಿಸಿದ್ದು, ಅದನ್ನು ಪುರಸಭೆಯ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ನಮ್ಮಲ್ಲಿ ಅದರ ದುರಸ್ತಿಗೆ ಸಂಬಂಧಿಸಿ ಯಾವುದೇ ಅವಕಾಶವಿಲ್ಲ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಎಇ ಶೋಭಾಲಕ್ಷ್ಮೀ ಹೇಳುತ್ತಾರೆ.
ಯೋಜನೆ ಹಸ್ತಾಂತರವಾಗಲಿಲ್ಲ: ಜಕ್ರಿಬೆಟ್ಟಿನಲ್ಲಿ ಅನುಷ್ಠಾನಗೊಂಡಿರುವ ಎರಡನೇ ಹಂತದ ಬೃಹತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಇನ್ನು ಕೂಡ ಪುರಸಭೆಗೆ ಹಸ್ತಾಂತರವಾಗಿಲ್ಲ,ಹಾಗಾಗಿ ಪಂಪ್ ಹೌಸ್ ನ ದುರಸ್ಥಿ ಕಾರ್ಯ ಕ.ನ.ನೀ.ಸ.ಹಾಗೂ ಒಳಚರಂಡಿ ಇಲಾಖೆಯೇ ಮಾಡಬೇಕು, ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ ಪುರಸಭೆ ಬಂಟ್ವಾಳ


