ಕುಪ್ಪೆಪದವು:ಮನೆಯಲ್ಲಿದ್ದ 58 ವರ್ಷದ ಮಹಿಳೆ ಕಾಲು ನೋವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಆಕೆಯಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕುಪ್ಪೆಪದವು ಸಮೀಪದ ಆಚಾರಿಜೋರದಲ್ಲಿ ಮಹಿಳೆಯ ಮನೆ ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಕಾಲು ನೋವಿನಿಂದ ಬಳಲುತ್ತಿದ್ದ ಮಹಿಳೆ ಕಳೆದ ಕೆಲವು ಶನಿವಾರ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ತೆರಳಿದ್ದರು, ಅಲ್ಲಿನ ವೈದ್ಯರು ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿ ಕಾಲಿನ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಿದ್ದರು. ಆ ವೇಳೆ ಮಹಿಳೆಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಗೆ ಕಳುಹಿಸಲಾಗಿತ್ತು, ಇದರ ವರದಿ ಬಂದಾಗ ಮಹಿಳೆಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಇ ಹಿನ್ನೆಲೆಯಲ್ಲಿ ಆಚಾರಿಜೋರದ ಮಹಿಳೆಯ ಮನೆಯಲ್ಲಿರುವ ಮೂವರು ಮಕ್ಕಳು ಸಹಿತ ಒಟ್ಟು 7 ಜನರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಹಾಗು ಸುತ್ತಮುತ್ತಲ 50 ಮೀಟರ್ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ.ಮಹಿಳೆ ಕೆಲವು ದಿನಗಳ ಹಿಂದೆ ಕಾಲು ನೋವಿಗೆ ಸಂಬಂಧಿಸಿದಂತೆ ಕಾರ್ಕಳದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು, ಇದನ್ನು ಹೊರತುಪಡಿಸಿದರೆ ಬೇರೆ ಎಲ್ಲೂ ಪ್ರಯಾಣಿಸಿರಲಿಲ್ಲ ಆದರೂ ಪಾಸಿಟಿವ್ ಕಂಡು ಬಂದಿದೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಮಹಿಳೆಯ ಮನೆಯ ಸುತ್ತಲಿನ ಸುಮಾರು ಇಪ್ಪತ್ತು ಮನೆಗಳು ಮತ್ತು ಆಚಾರಿ ಜೋರ ಮಸೀದಿ ಸೀಲ್ ಡೌನ್ ವ್ಯಾಪ್ತಿಯೊಳಗೆ ಸೇರಿವೆ.
ಸೀಲ್ ಡೌನ್ ಒಳಗೆ ಮಸೀದಿ ಆಕ್ಷೇಪ: ಮಸೀದಿಯನ್ನು ಸೀಲ್ ಡೌನ್ ವ್ಯಾಪ್ತಿಗೆ ಸೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.ಪಂಚಾಯತ್ ಸದಸ್ಯರು ಸೇರಿದಂತೆ ಹಲವರು ಪಂಚಾಯತ್ ಗೆ ಆಗಮಿಸಿ ಮಸೀದಿಯನ್ನು ಸೀಲ್ ಡೌನ್ ಒಳಗಡೆ ತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮಸೀದಿಯನ್ನು ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.ಅಲ್ಲದೆ ಇತ್ತೀಚಿಗೆ ಎರ್ಮಾಳ ದಲ್ಲಿ ಯುವಕ ಮೃತಪಟ್ಟ ಸಂದರ್ಭದಲ್ಲಿ ಕಡಿಮೆ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿತ್ತು, ಆದರೆ ಆಚಾರಿ ಜೋರ ದಲ್ಲಿ ಹೆಚ್ಚು ವ್ಯಾಪ್ತಿಯನ್ನು ಸೇರಿಸುವ ಮೂಲಕ ತಾರತಮ್ಯ ಎಸಗಲಾಗಿದೆ, ಹಾಗು ಸಾರ್ವಜನಿಕ ವ್ಯಕ್ತಿಯೋರ್ವ ಸೀಲ್ ಡೌನ್ ಸಂದರ್ಭದ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಆರೋಪಿಸಿದರು.ಸರಕಾರದ ಮಾರ್ಗಸೂಚಿಗಳ ಪ್ರಕಾರವೇ ಸೀಲ್ ಡೌನ್ ಮಾಡಲಾಗಿದೆ.ತಾರತಮ್ಯದ ಪ್ರಶ್ನೆ ಇಲ್ಲ, ಅಲ್ಲದೆ ಸೀಲ್ ಡೌನ್ ಪ್ರಕ್ರಿಯೆಗಳು ಮುಖ್ಯರಸ್ತೆಯ ಪಕ್ಕದಲ್ಲಿಯೇ ನಡೆಯುತ್ತಿದ್ದು, ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿರಲಿಲ್ಲ.ಪ್ರಾರ್ಥನೆ ಗಾಗಿ ಮಸೀದಿಗೆ ತೆರಳಲು ಅವಕಾಶ ನೀಡಲಾಗಿದೆ. ಎಂದು ಕುಪ್ಪೆಪದವು ಪಂಚಾಯತ್ ಪಿಡಿಓ ಸವಿತಾ ಮಂದೋಲಿಕರ್ ಮತ್ತು ಬಜಪೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಗ್ರಾಮಕರಣಿಕರು, ಆರೋಗ್ಯ ಸಿಬಂದಿ, ಆಶಾಕಾರ್ಯಕರ್ತರು ಮೊದಲಾದವರು ಭೇಟಿ ನೀಡಿದ್ದರು.
ವರದಿ ಮಾಡಲು ತೆರಳಿದವರ ಜತೆ ಅನುಚಿತ ವರ್ತನೆ
ಸೀಲ್ ಡೌನ್ ಪ್ರಕ್ರಿಯೆಗಳು ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ವರದಿಗಾರ ಸೀಲ್ ಡೌನ್ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಕರಣಿಕರ ಜತೆ ಮಾಹಿತಿ ಪಡೆಯುತ್ತಿದ್ದ ವೇಳೆ ರಾಜಕೀಯ ಮುಖಂಡನೊಬ್ಬ ವರದಿಗಾರನೊಂದಿಗೆ ಅನುಚಿತವಾಗಿ ವರ್ತಿಸಿ, ಸೀಲ್ ಡೌನ್ ವಿಚಾರದಲ್ಲಿ ವಾಗ್ವಾದಕ್ಕಿಳಿದಾಗ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಸುಮ್ಮನಾಗಿಸಿದರು.

