ಕೈಕಂಬ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತರು, ಬಡ ಕಾರ್ಮಿಕರು ಮತ್ತು ವಲಸಿಗರ ಕಷ್ಟಗಳ ಬಗ್ಗೆ ಪೂರ್ವಾಪರ ಯೋಚಿಸದೆ ಅವೈಜ್ಞಾನಿಕ ಹಿನ್ನೆಲೆಯ ಲಾಕ್ಡೌನ್ ನಿಯಮ ಜಾರಿಗೊಳಿಸಿದೆ. ಜೊತೆಗೆ ಕೊರೊನಾ ಮಹಾಮಾರಿ ವ್ಯಾಪಿಸಿರುವ ಸಂದರ್ಭದಲ್ಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆಗಳಲ್ಲಿ ತಿದ್ದುಪಡಿ ತಂದು ಬಂಡವಾಳ ಶಾಹಿಗಳು ಮತ್ತು ಕಾರ್ಪೊರೆಟ್ ಸಂಸ್ಥೆಗಳನ್ನು ಇನ್ನಷ್ಟು ಉದ್ಧರಿಸಲು ಹೊರಟಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ(ಕೆಪಿಆರ್ಎಸ್) ರಾಜ್ಯ ಸಮಿತಿ ಉಪಾಧ್ಯಕ್ಷ ಯಾದವ ಶೆಟ್ಟಿ ಆರೋಪಿಸಿದರು.
ಸಂಘವು ಜೂನ್ 30ರವರೆಗೆ ರಾಜ್ಯದಾದ್ಯಂತ ಗ್ರಾಮ ಪಂಚಾಯತ್ಗಳೆದುರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಡಜನ ವಿರೋಧಿ ಪ್ರತಿಭನಾ ಧರಣಿ ಆಯೋಜಿಸಿದ್ದು, ಇದರ ಪೂರ್ವಭಾವಿಯಾಗಿ ಶನಿವಾರ ಸಂಜೆ ಗುರುಪುರ ಕೈಕಂಬ ಜಂಕ್ಷನ್ನಲ್ಲಿ ಕಾರ್ಯಕರ್ತರು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಗುರುಪುರ ರೈತ ಸಂಘದ ಕಾರ್ಯದರ್ಶಿ ಸದಾಶಿವ ದಾಸ್ ಮಾತನಾಡಿದರು. ಗುರುಪುರ ವಲಯ ಸಮಿತಿಯ ನೋಣಯ್ಯ ಗೌಡ, ಬಾಬು ಸಾಲ್ಯಾನ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
