ಕೈಕಂಬ : ಪೊಲೀಸ್ ಎಸ್ಕಾರ್ಟ್‍ನೊಂದಿಗೆ(ಪಿಸಿಆರ್) ಪ್ರತಿಯೊಂದು ಅಂಗಡಿಗೆ ಬಂದು ತಂಬಾಕು ಮಾರಾಟ ನಿಯಮ ಮತ್ತು ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾದ ಎರಡು ಸಣ್ಣ ಫ್ಲೆಕ್ಸ್‍ಗಳನ್ನು ಒದಗಿಸುತ್ತಿರುವ ಆರೋಗ್ಯ ಸಿಬ್ಬಂದಿಯು, ಈ ಕೆಲಸಕ್ಕೆ ರಶೀದಿರಹಿತ 200 ರೂ ಸ್ವೀಕರಿಸುತ್ತಿದ್ದಾರೆ ಎಂದು ಗುರುಪುರ ಅಂಗಡಿ ಮಾಲಕರು ಆರೋಪಿಸಿದ್ದಾರೆ.28vp gurupura

ಯಾವುದೇ ಇಲಾಖೆಯ ಅಡಿಬರೆಹ ಇಲ್ಲದ ಹಾಗೂ ಪಾವತಿಗೆ ರಶೀದಿರಹಿತ ಈ ಫೆಕ್ಸ್ ಸ್ವೀಕರಿಸಲು ನಿರಾಕರಿಸಿದ ಗುರುಪುರದ ಅಂಗಡಿ ಮಾಲಕರೊಬ್ಬರಿಗೆ ಬಜ್ಪೆ ಪೊಲೀಸರು ಕೇಸ್ ಹಾಕಲಾಗುವುದೆಂದು ಬೆದರಿಸಿದ್ದಾರೆ ಎನ್ನಲಾಗಿದೆ.

“ಅಂಗಡಿಗಳಲ್ಲಿ ಈ ಫ್ಲೆಕ್ಸ್ ಅನಾವರಣಗೊಳಿಸಲು ಅಡ್ಡಿ ಇಲ್ಲ. ಆದರೆ ನಮ್ಮಿಂದಲೇ 200 ರೂ ಸ್ವೀಕರಿಸುವುದು ಯಾವ ಕಾನೂನು ? ತಂಬಾಕು ಅಥವಾ ಬೀಡಿ, ಸಿಗರೇಟ್ ಪೂರೈಕೆ ಬಂದ್ ಮಾಡಲಿ. ಆಗ ಮಾರಾಟದ ಪ್ರಶ್ನೆಯೇ ಬರುವುದಿಲ್ಲ” ಎಂದು ಗುರುಪುರದ ಅಂಗಡಿ ಮಾಲಕರೊಬ್ಬರು ಹೇಳಿದರು.

“ಆರೋಗ್ಯ ಇಲಾಖೆಯಿಂದ ಯಾವುದೇ ಎನ್‍ಜಿಒಗಳಿಗೆ ತಂಬಾಕು ನಿಷೇಧ ಕುರಿತಾದ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡಿಲ್ಲ. ಒಂದೊಮ್ಮೆ ಫ್ಲೆಕ್ಸ್ ಅಳವಡಿಸಿ ಹಣ ಸ್ವೀಕರಿಸಿದರೆ ರಶೀದಿ ನೀಡಬೇಕು. ಅವರೇನಾದರೂ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದಾರೆಯೇ ಎಂಬುದು ನಮಗೆ ಗೊತ್ತಾಗಿಲ್ಲ” ಎಂದು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ತಿಳಿಸಿದರು.

“ಅಂಗಡಿಗಳಲ್ಲಿ ತಂಬಾಕು ನಿಷೇಧ ಫ್ಲೆಕ್ಸ್ ಅಳವಡಿಕೆ ನಮ್ಮ ಗಮನಕ್ಕೆ ಬಂದಿಲ್ಲ. ಕಾನೂನುಬಾಹಿರ ಕೆಲಸ ನಡೆಯುತ್ತಿದ್ದರೆ ಸಂಬಂಧಿತ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಜರುಗಿಸಲಾಗುವುದು” ಎಂದು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅಮಿತ್ ರಾಜ್ ಹೇಳಿದರು.

By suddi9

Leave a Reply

Your email address will not be published. Required fields are marked *