ಬಂಟ್ವಾಳ:ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರೀ ಗೊಂದಲ ಉಂಟು ಮಾಡಿದ್ದ ಶೈಕ್ಷಣಿಕ ಅವಧಿಯ ಮಹತ್ವದ ಹೆಜ್ಜೆ ಎಂದು ಗುರುತಿಸಿಕೊಂಡ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇದೇ 25ರಂದು ಆರಂಭಗೊಂಡು ಜುಲೈ 4ರತನಕ ಪರೀಕ್ಷೆ ನಿರಾತಂಕವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದೆ.
ಮುಖ್ಯಾಂಶಗಳು:
ಪ್ರತೀ ಕೇಂದ್ರದಲ್ಲಿ ತಲಾ ಎರಡು ವಿಶ್ರಾಂತಿ ಕೊಠಡಿ
ಇದೇ ಪ್ರಥಮ ಬಾರಿಗೆ ಶಿಕ್ಷಕರ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳು ಕರ್ತವ್ಯಕ್ಕೆ
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕೊಡುಗೆ
ಜ್ವರ ಪರೀಕ್ಷೆ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
ಅಂತರ ಕಾಪಾಡಲು ಹೆಚ್ಚುವರಿ ಶಿಕ್ಷಕರ ನಿಯೋಜನೆ
ಸ್ಥಳೀಯಾಡಳಿತಕ್ಕೆ ಶುಚಿತ್ವ, ಔಷಧಿ ಸಿಂಪಡಣೆ ಜವಾಬ್ದಾರಿ
ಸ್ವತಃ ವಿದ್ಯಾರ್ಥಿಗಳೇ ನೀರು, ಆಹಾರ ತರಲು ಸೂಚನೆ
ಆಯಾಯ ಶಾಲೆಗಳಲ್ಲೇ ಪರೀಕ್ಷೆ ನಡೆಸಲು ಸಲಹೆ ನೀಡಿದ್ದ ಶಿಕ್ಷಕರು, ಪೋಷಕರು
ಆನ್ ಲೈನ್, ನೇರ ಸಭೆ, ತರಬೇತಿ, ಶಾಸಕ, ಶಿಕ್ಷಣ ಸಚಿವರಿಂದಲೇ ಪೂರ್ವಭಾವಿ ಸಭೆ
ತಾಲ್ಲೂಕಿನಲ್ಲಿ ಈ ಬಾರಿ ಎರಡು ಹೆಚ್ಚುವರಿ ಸೇರಿದಂತೆ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5300 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇಲ್ಲಿನ ಬಂಟ್ವಾಳ ಎಸ್ ವಿ. ಎಸ್., ಮೊಡಂಕಾಪು ದೀಪಿಕಾ ಮತ್ತು ಕಾರ್ಮೆಲ್, ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ತಲಾ ಎರಡು ಪರೀಕ್ಷಾ ಕೇಂದ್ರಗಳಿದೆ. ಉಳಿದಂತೆ ವಾಮದಪದವು, ವಗ್ಗ, ಮಂಚಿ, ಮುಡಿಪು, ಮೊಂಟೆಪದವು, ಕನ್ಯಾನ ಸರ್ಕಾರಿ ಪ್ರೌಢಶಾಲೆ ಹಾಗೂ ಮಾಣಿ ಕರ್ನಾಟಕ ಪ್ರೌಢಶಾಲೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಪಾಣೆಮಂಗಳೂರು ಶಾರದಾ ಮತ್ತು ಎಸ್ ಎಲ್ ಎನ್ ಪಿ ಪ್ರೌಢಶಾಲೆ, ತುಂಬೆ ಪದವಿ ಪೂರ್ವ ಕಾಲೇಜು, ಅಳಿಕೆ ಸತ್ಯಸಾಯಿ ಪ್ರೌಢಶಾಲೆಯಲ್ಲಿ ತಲಾ ಒಂದರಂತೆ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಕೆಲವೊಂದು ವಿದ್ಯಾರ್ಥಿಗಳನ್ನು ಸ್ವತಃ ಪೋಷಕರೇ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದರೆ, ಖಾಸಗಿ ಶಾಲೆಗಳು ಅವರ ಶಾಲಾ ಬಸ್ ಬಳಸಿಕೊಳ್ಳಲಿದೆ. ಉಳಿದಂತೆ ಮುಡಿಪು ಮತ್ತು ಮೊಂಟೆಪದವು ಪರೀಕ್ಷಾ ಕೇಂದ್ರಕ್ಕೆ ಶಾಸಕ ಯು.ಟಿ.ಖಾದರ್ ಸಲಹೆಯಂತೆ ಅಲ್ಲಿನ ಸೂರಜ್ ಶಿಕ್ಷಣ ಸಂಸ್ಥೆ ಮತ್ತು ಆಲ್ ಮದೀನಾ ಶಿಕ್ಷಣ ಸಂಸ್ಥೆ ತಲಾ ಒಂದರಂತೆ ಉಚಿತ ಬಸ್ ಸೌಲಭ್ಯ ಒದಗಿಸಲಿದೆ. ಉಳಿದ ಸರ್ಕಾರಿ ಶಾಲೆಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಲಹೆಯಂತೆ ಅರಳ ಜನಹಿತಾಯ ಶಿಕ್ಷಣ ಸಂಸ್ಥೆ-4 ಬಸ್, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ-10, ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್-4, ಪಚ್ಚಿನಡ್ಕ ಶುಭಲಕ್ಷ್ಮಿ ಟ್ರಾವೆಲ್ಸ್ -4, ಸಜಿಪಮೂಡ ವೃಷಭ ಮೋಟಾರ್ಸ್-4 ಬಸ್ ಒದಗಿಸುವ ಭರವಸೆ ನೀಡಿದೆ.
ಈಗಾಗಲೇ ಉಡುಪಿ ಜಿ.ಶಂಕರ್ ಪ್ರತಿಷ್ಠಾನ ಮತ್ತು ಜಿಲ್ಲಾ ಸ್ಕೌಟ್ಸ್ ಎಂಡ್ ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ತಲಾ ಎರಡರಂತೆ ಉಚಿತ ಮಾಸ್ಕ್ ಒದಗಿಸಿದೆ. ಈ ಬಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಶಿಕ್ಷಣ ಇಲಾಖೆ ಜೊತೆಗೆ ಆರೋಗ್ಯ, ಪೊಲೀಸ್ ಮತ್ತಿತರ ಇಲಾಖೆಗಳು ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕೈಜೋಡಿಸಿದೆ. ಈ ಬಾರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾಯ ಶಾಲೆಗಳಲ್ಲೇ ಪರೀಕ್ಷೆ ನಡೆಸಿ, ಬೇರೆ ಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಬೇಕು ಎಂಬ ಬೇಡಿಕೆ ಪ್ರತೀ ಶಾಲೆಯಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಈ ಬಾರಿ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಚುನಾವಣೆ ಮಾದರಿಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಇದಕ್ಕಾಗಿ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆನ್ ಲೈನ್ ಮತ್ತು ನೇರ ತರಬೇತಿ ನಡೆದಿದೆ. ಇಲ್ಲಿನ ಇಬ್ಬರು ಶಾಸಕರು ಪ್ರತ್ಯೇಕ ಸಮಾಲೋಚನಾ ಸಭೆ ನಡೆಸಿದ್ದರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಎರಡು ಬಾರಿ ಆನ್ ಲೈನ್ ಮತ್ತು ಒಂದು ಬಾರಿ ಉಡುಪಿಯಲ್ಲಿ ನೇರ ಸಮಾಲೋಚನಾ ಸಭೆ ನಡೆಸಿದ್ದಾರೆ.
ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಶುಚಿತ್ವ ಮತ್ತು ಸ್ಯಾನಿಟೈಸೇಷನ್ ನಡೆಸಲು ಆಯಾಯ ಗ್ರಾಮ ಪಂಚಾಯಿತಿ ಮತ್ತು ಪುರಸಭೆಗೆ ಜವಾಬ್ದಾರಿ ವಹಿಸಲಾಗಿದೆ. ಪೊಲೀಸರು ಬಂದೋಬಸ್ತು ಏರ್ಪಡಿಸುತ್ತಿದ್ದು, ಮಕ್ಕಳು ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಲು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ
