ಕೈಕಂಬ:ಸುದ್ದಿ9: ಗುರುಪುರದಲ್ಲಿ ಕಳೆದ ವರ್ಷ ಫೆಬ್ರವರಿ 2ರಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಅವರಿಂದ ಶಿಲಾನ್ಯಾಸಗೊಂಡಿದ್ದ ಫಲ್ಗುಣಿ ನದಿಗೆ ಅಡ್ಡಲಾಗಿ, ಹಳೆಯ ಸೇತುವೆಗೆ ಪರ್ಯಾಯವಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಉದ್ಘಾಟನೆಗೆ ಕ್ಷಣಗಣನೆ ಎಣಿಸುತ್ತಿದೆ. ಜೂನ್ 5ರಂದು ಉದ್ಘಾಟನೆಗೊಳ್ಳಬೇಕಿದ್ದ ಸಮಾರಂಭ ಕಾರಣಾಂತರಗಳಿಂದ ಕೆಲವು ದಿನ ಮುಂದೂಡಲ್ಪಟ್ಟಿದೆ.
ಒಟ್ಟು 39.420 ಕೋಟಿ ರೂ ವೆಚ್ಚದ ಕಾಮಗಾರಿ ಇದಾಗಿದೆ. 175 ಮೀಟರ್ ಉದ್ದದ ಹೊಸ ಸೇತುವೆಯಲ್ಲಿ ಏಳು ಅಂಕಣ(ಪಿಲ್ಲರ್) ಇದ್ದರೆ, ಒಟ್ಟು 16 ಮೀಟರ್ ಅಗಲದ ಸೇತುವೆಯ 10 ಮೀಟರ್ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದ್ದರೆ, ಎರಡೂ ಪಾಶ್ವದಲ್ಲಿ ಮೂರು ಮೀಟರ್ ಅಂತರದ ಕಾಲುದಾರಿ ಒಳಗೊಂಡಿದ್ದರೆ, ಎರಡು ಕೊನೆಯಲ್ಲಿ ತಲಾ 500 ಮೀಟರ್ ಉದ್ದದ ಕೂಡುರಸ್ತೆ ನಿರ್ಮಾಣಗೊಂಡಿದೆ. ಸರ್ಕಾರ ಎರಡು ವರ್ಷದ ಗಡುವು ನೀಡಿದ್ದರೂ, ಕೊರೊನಾ ಲಾಕ್‍ಡೌನ್ ಮುಂದುವರಿದಿರುವ ಹೊರತಾಗಿಯೂ ಹೊಸ ಸೇತುವೆ ಒಂದು ವರ್ಷ ನಾಲ್ಕು ತಿಂಗಳಲ್ಲಿ ಸಿದ್ಧಗೊಂಡಿದೆ.
ಸುಧಾಕರ ಶೆಟ್ಟಿ ಕಾವೂರು ಮಾಲಕತ್ವದ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸೇತುವೆ ಕಾಮಗಾರಿ ನಡೆಸಿದೆ. ಕಳೆದ ವರ್ಷ ಎದುರಾದ ಪ್ರಾಕೃತಿಕ ಹಾಗೂ ಪ್ರಾದೇಶಿಕ ಸಮಸ್ಯೆಗಳ ಹೊರತಾಗಿಯೂ ಸೇತುವೆ ನಿರ್ಮಾಣ ನಿಗದಿತ ಅವಧಿಗಿಂತ ಮುಂಚೆಯೇ ಪೂರ್ಣಗೊಂಡಿದೆ.
``ಕೊರೊನಾ ಲಾಕ್‍ಡೌನ್‍ನಿಂದಾಗಿ ಕಾಮಗಾರಿ ಸಲಕರಣೆ ಸಾಗಾಟ ವಿಳಂಬವಾಗಿದ್ದರೂ, ಹೊಸ ಸೇತುವೆ ಎರಡು ವರ್ಷದ ಗಡುವಿಗಿಂತ ಮುಂಚೆಯೇ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಆರಂಭದಿಂದಲೂ ದಿನಕ್ಕೆ 60ರಷ್ಟು ಕಾರ್ಮಿಕರು ಮಳೆ-ಬಿಸಿಲು ಲೆಕ್ಕಿಸದೆ ಕೆಲಸ ನಡೆಸಿದ್ದಾರೆ. ಹಲವು ಇಂಜಿನಿಯರ್‍ಗಳ ತಾಂತ್ರಿಕ ಶ್ರಮ ಮರೆಯುವಂತಿಲ್ಲ. ಮತ್ತೊಂದು ಮಳೆಗಾಲಕ್ಕೆ ಮುಂಚೆಯೇ ಹೊಸ ಸೇತುವೆ ನಿರ್ಮಾಣಗೊಂಡಿದ್ದು, ಈ ಕಾಮಗಾರಿ ಕಂಪೆನಿ ಹಾಗೂ ಮಾಲಕರ ಹೊಸ ಆಲೋಚನೆಗಳಿಗೆ ಮಾನದಂಡವಾಗಿದೆ ಎಂದು ಕಂಪೆನಿಯ ಪ್ರಧಾನ ಇಂಜಿನಿಯರ್ ಶಿವಸುಬ್ರಹ್ಮಣ್ಯ ಹೇಳುತ್ತಾರೆ.
ರಾಷ್ಟ್ರೀಯ ಹೆದ್ದಾರಿಗೆ(169) ತಿಲಕಪ್ರಾಯದಂತಿರುವ ಗುರುಪುರ ಸೇತುವೆ ಲೋಕಾರ್ಪಣೆಗೊಳ್ಳುತ್ತಲೇ, ಅಗಲ ಕಿರಿದಾದ ಹಳೆಯ ಸೇತುವೆಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಟ್ರಾಫಿಕ್ ಜ್ಯಾಂ ಕಡಿಮೆಯಾಗಲಿದೆ. ಎರಡು ಕಡೆಯಲ್ಲಿ ನಿರ್ಮಿಸಲಾದ ತಲಾ 500 ಮೀಟರ್ ಉದ್ದದ ವಿಶಾಲ ಕೂಡುರಸ್ತೆಯಲ್ಲಿ ಮೂರು ಬೃಹತ್ ಮೋರಿ ಅಳವಡಿಸಲಾಗಿದ್ದು, ಪ್ರವಾಹ ನೀರು ಸರಾಗವಾಗಿ ಹರಿದಾಡಲಿದೆ.
