ಕೈಕಂಬ: ಕೋವಿಡ್ -19 ವೈರಸ್ ಮಹಾಮಾರಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕಳೆದೊಂದು ತಿಂಗಳಿಂದ ಜಾರಿಯಲ್ಲಿರುವ ಲಾಕ್ ಡೌನ್ ನನ್ನು ಇನ್ನೂ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಸ್ವಲ್ಪ ಸಡಿಲಿಕೆ ಸಿಕ್ಕರೂ ಸಾಕು ಅನವಶ್ಯ ವಾಗಿ ರಸ್ತೆಗಿಳಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮಧ್ಯಾಹ್ನ 12 ಗಂಟೆಯವರೆಗೆ ದೈನಂದಿನ ಜೀವನಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಕೊಟ್ಟಿರುವ ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ, ಗುರುಪುರ ಕೈಕಂಬ, ಗಂಜಿಮಠ, ಎಡಪದವು ಮತ್ತು ಕುಪ್ಪೆಪದವು ಪೇಟೆಗಳಲ್ಲಿ ಜನ ಬೇಕಾಬಿಟ್ಟಿಯಾಗಿ ಅನಾವಶ್ಯಕವಾಗಿ ತಿರುಗಾಡುತ್ತಿರುವ ದ್ರಶ್ಯಗಳು ಸಾಮಾನ್ಯವಾಗಿವೆ.
ಜನರು ಓಡಾಡುವುದನ್ನು ನೋಡಿದರೆ ಕೊರೊನಾ ಎಂಬುದೊಂದಿದೆಯೇ, ಲಾಕ್ ಡೌನ್ ಜಾರಿಯಲ್ಲಿದೆಯೇ ಎಂಬ ಅನುಮಾನ ಹುಟ್ಟಿಸುವಂತಿದೆ. ಪ್ರಾರಂಭದ ದಿನಗಳಲ್ಲಿ ಕಾಣುತ್ತಿದ್ದ ಸಾಮಾಜಿಕ ಅಂತರ ಇದೀಗ ಕಾಣೆಯಾಗಿದೆ, ಹೆಚ್ಚಿನವರ ಮುಖದಿಂದ ಮಾಸ್ಕ್, ಟವೆಲ್ ಗಳು ನಾಪತ್ತೆಯಾಗಿವೆ, ಕೆಲವರಂತೂ ಸರಕಾರ ಜಾರಿ ಮಾಡಿರುವ ಲಾಕ್ ಡೌನ್ ನಿಯಮಗಳನ್ನು ಮುರಿಯಲೇ ಬೇಕು ಎಂಬ ಹಠ ತೊಟ್ಟವರಂತೆ ಅನಾವಶ್ಯಕವಾಗಿ ಭಂಡತನವನ್ನು ತೋರಿಸುತ್ತಿದ್ದಾರೆ, ಈ ಮೂಲಕ ಬೀದಿಯಲ್ಲಿ ಹೋಗೋ ಮಾರಿಯನ್ನು ಮನೆಗೆ ಕರೆಯೋ ಧಾವಂತದಲ್ಲಿದ್ದಾರೆ.
ಬಜಪೆ ಪೊಲೀಸರು ಲಾಕ್ ಡೌನ್ ಘೋಷಣೆಯಾದ ದಿನದಿಂದ ಇದುವರೆಗೆ ಒಟ್ಟು 25 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜನ ಸೇರದಂತೆ ನೋಡಿಕೊಳ್ಳುತ್ತಿದ್ದಾರೆ, ಆದರೆ ಪೊಲೀಸರನ್ನು, ಅಧಿಕಾರಿಗಳನ್ನು ಕಂಡ ಕೂಡಲೇ ಮರೆಯಾಗುವ ಪ್ರಭೂತಿಗಳು ಅವರು ಮರೆಯಾಗುತ್ತಲೇ ಮತ್ತೆ ರಸ್ತೆಗಿಳಿಯುತ್ತಾರೆ.
ಎಲ್ಲಿವೆ ಟಾಸ್ಕ್ ಪೋರ್ಸ್ ಗಳು:
ಲಾಕ್ ಡೌನ್ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಸರಕಾರದ ಆದೇಶದನ್ವಯ ಗ್ರಾಮಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಪೋರ್ಸ್ ಗಳು ಕೇವಲ ಮೀಟಿಂಗ್ ಗಳಿಗೆ ಸೀಮಿತವಾದಂತಿವೆ.ಕೆಲವೇ ಕೆಲವು ಪಂಚಾಯತ್ ಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಪಂಚಾಯತ್ ಟಾಸ್ಕ್ ಪೋರ್ಸ್ ಗಳು ಫೀಲ್ಡ್ ಗಿಳಿದು ಕಾರ್ಯ ನಿರ್ವಹಿಸುತ್ತಿಲ್ಲ, ಪೇಟೆಗಳಿಗೆ ಬರುವ ಜನ ಸಾಮಾಜಿಕ ಅಂತರ ಕಾಯ್ದು ಕೊಳ್ಳುವದರ ಬಗ್ಗೆ ನಿಗಾವಹಿಸುತ್ತಿಲ್ಲ, ಅಂಗಡಿಗಳಲ್ಲಿ ದರಪಟ್ಟಿ ಅಳವಡಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ.ಜನರಿಗೆ ಮಾಸ್ಕ್ ಧರಿಸುವ ಕುರಿತಂತೆ ಮಾಹಿತಿ ನೀಡುವ, ಜಾಗ್ರತಿ ಮೂಡಿಸುವ ಕಾರ್ಯ ಮಾಡುತ್ತಿಲ್ಲ.ಇದರಿಂದಾಗಿ ಯಾವ ಉದ್ದೇಶದಿಂದ ಲಾಕ್ ಡೌನ್ ಜಾರಿಯಾಗಿದೆಯೋ ಅದು ವ್ಯರ್ಥ ವಾಗುತ್ತಿದೆ.
ದಿನದಿಂದ ದಿನಕ್ಕೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದ್ದರೂ ಕೆಲವರಿಗಂತೂ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ.ಕೆಲವೇ ಕೆಲವು ಆಟೋ ರಿಕ್ಷಾ ಗಳು ಪೊಲೀಸರ ಕಣ್ಣೆದುರೇ ನಿರಂತರವಾಗಿ ಬಾಡಿಗೆ ಮಾಡುತ್ತಿದ್ದರೆ, ಇನ್ನು ಕೆಲವು ರಿಕ್ಷಾಗಳನ್ನು ಕಂಡ ಕೂಡಲೇ ಪೊಲೀಸರು ಬೆನ್ನಟ್ಟುತ್ತಿದ್ದಾರೆ ಎಂದು ರಿಕ್ಷಾ ಚಾಲಕರು ಆರೋಪ ಮಾಡುತ್ತಿದ್ದಾರೆ, ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಅನ್ವಯಿಸುತ್ತಿದ್ದಾರೆ ಎಂಬ ಆರೋಪಗಳು ಬಾರದಂತೆ ನೋಡಿಕೊಳ್ಳಬೇಕಾಗಿದೆ.ಪೊಲೀಸರು, ಅಧಿಕಾರಿಗಳು ಮೃದುಧೋರಣೆ ತಳೆದರೆ, ಜನ ಏನೂ ಆಗುವುದಿಲ್ಲ ಎಂದು ಭಾವಿಸಿ ರಸ್ತೆಗಿಳಿಯುತ್ತಾರೆ.
ಕೋವಿಡ್ -19 ವೈರಸ್ ಹರಡುವುದನ್ನು ತಡೆಯಬೇಕಾದರೆ ಲಾಕ್ ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾಗಿದೆ, ಜನ ಬೇಕಾಬಿಟ್ಟಿಯಾಗಿ, ಮಾಸ್ಕ್ ಧರಿಸದೇ ಓಡಾಡುವುದನ್ನು ನಿಯಂತ್ರಿಸಲು ಪೊಲೀಸರು, ಅಧಿಕಾರಿಗಳು ಕಠಿಣವಾಗಿ ವರ್ತಿಸಬೇಕಾಗಿದೆ.