ಗುರುಪುರ : ಪ್ರಸಕ್ತ ಚಾಲ್ತಿಯಲ್ಲಿರುವ ಕೊರೊನ ಮಹಾಮಾರಿ ಲೆಕ್ಕಿಸದೆ ಪತ್ರಕರ್ತನೊಬ್ಬ ಪಂಚಾಯತ್ ಅಥವಾ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯದೆ ನಿರಾಶ್ರಿತ ಮೂವರ ಕುಟುಂಬವೊಂದಕ್ಕೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟ್‍ನ ಮುರುಕಲು ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ ಬಳಿಕ ಸ್ಥಳೀಯರಲ್ಲಿ ಉಂಟಾಗಿರುವ ಆತಂಕದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದ ಅಧಿಕಾರಿ ತಂಡ ಮೂವರಲ್ಲಿ ಇಬ್ಬರನ್ನು ಮಂಗಳೂರಿನ ನಿರಾಶ್ರಿತರ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿತು.
ಎರಡು ತಿಂಗಳ ಹಿಂದೆ ಪೊಳಲಿ ದ್ವಾರದ ಬಳಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಮತಾಂತರಗೊಂಡಿದ್ದಾನೆ ಎನ್ನಲಾದ ಡ್ಯಾನಿಶ್ ಯಾನೆ ದಿನೇಶ್ ಹಾಗೂ ಆತನ ಪತ್ನಿ ಆಶಾ ಮತ್ತು ಅವರ ಗಂಡು ಮಗುವಿಗೆ ಪತ್ರಕರ್ತನು ಕೊರೊನ ಲಾಕ್‍ಡೌನ್ ಅವಧಿಯಲ್ಲೇ ಮಠದಗುಡ್ಡೆ ಸೈಟಿನ ಪುಷ್ಪಾ ಕಣ್ಣನ್ ಎಂಬವರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದ.
ಈ ಕುಟುಂಬದ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗರು ಪಂಚಾಯತ್, ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಕೆಲವು ದಿನಗಳ ಹಿಂದೆ ನೋಡೆಲ್ ಅಧಿಕಾರಿ ರಾಜಲಕ್ಷ್ಮೀ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕುಟುಂಬಕ್ಕೆ ಚ್ಚರಿಕೆ ನೀಡಿ ತೆರಳಿದ್ದರು.
ಬಳಿಕ ಗುರುಪುರ ಗ್ರಾಪಂನ ಗ್ರಾಮೀಣ ಕಾರ್ಯಪಡೆ ತುರ್ತು ಸಭೆ ಕರೆದು, ಅನಧಿಕೃತವಾಗಿ ವಾಸಿಸುತ್ತಿದ್ದ ಸದ್ರಿ ಅಜ್ಞಾತ ಕುಟುಂಬವನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಮತ್ತು ಆರೋಗ್ಯ ತಪಾಸಣೆ ಮಾಡಬೇಕೆಂದು ನಿರ್ಣಯ ಕೈಗೊಂಡಿತ್ತು. ಕಾರ್ಯಪಡೆಯ ಸದಸ್ಯ ಡಾ. ಅಮಿತ್‍ರಾಜ್ ಪಂಚಾಯತ್ ವರದಿ ಪಡೆದು ಉಪ-ತಹಶೀಲ್ದಾರರ ಮೂಲಕ ತಹಶೀಲ್ದಾರರಿಗೆ ಕಳುಹಿಸಿದ್ದರು.
ಗುರುವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದದ ಉಪತಹಶೀಲ್ದಾರ್, ಪಿಡಿಒ, ಕೋವಿಡ್ ವಿಶೇಷ ಅಧಿಕಾರಿ, ಆಶಾ ಕಾರ್ಯಕರ್ತೆಯರ ತಂಡ ಮೂವರನ್ನು ವಶಕ್ಕೆ ಪಡೆದು ಡ್ಯಾನಿಶ್ ಹಾಗೂ ಮಗುವನ್ನು ಮಂಗಳೂರು ಪುರಭವನದ ನಿರಾಶ್ರಿತ ಕೇಂದ್ರ ಹಾಗೂ ಮಹಿಳೆ ಆಶಾರನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿತು. ಉಪತಹಶೀಲ್ದಾರ್ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ, “ಕೆಲವು ದಿನಗಳಿಂದ ಪರಿಸರದಲ್ಲಿ ಪಸರಿಸಿದ್ದ ಆತಂಕದ ವಾತಾವರಣ ಸದ್ಯ ತಿಳಿಯಾಗಿದೆ” ಎಂದಿದ್ದಾರೆ.
