ಗಂಜಿಮಠ : ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ಈಗ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಕಾರ್ಯಾಚರಿಸುತ್ತಿದೆ. ಇಲ್ಲಿ ಮೂರು ಪಾಳಿಯಲ್ಲಿ ಸಾವಿರಾರು ಮಂದಿ ಕಾರ್ಮಿಕರ ಕೆಲಸ ಮಾಡುತ್ತಿದ್ದು, ಇವರಲ್ಲಿ ಉತ್ತರ ಭಾರತೀಯರ ಸಹಿತ ಹೊರ ರಾಜ್ಯಗಳ ಕಾರ್ಮಿಕರೇ ಹೆಚ್ಚಿದ್ದಾರೆ. ಸಾಮಾನ್ಯ ಕೈಗಾರಿಕಾ ಘಟಕಗಳಿಂದ ಹಿಡಿದು ಬೃಹತ್ ಕೈಗಾರಿಕಾ ಘಟಕಗಳಿಗೆ ಲಾಕ್‍ಡೌನ್ ಮಾರ್ಗಸೂಚಿ ಅನ್ವಯವಾಗುತ್ತಿದ್ದರೂ, ಈ ಕಂಪೆನಿಗೆ ಮಾತ್ರ ಪ್ರಸಕ್ತ ಯಾವುದೇ ನಿರ್ಬಂಧ ಅಥವಾ ಕಾಯ್ದೆಯ ಭೀತಿ ಇಲ್ಲ. ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಕಂಪೆನಿ ಮಾಲಕರು ಕಂಪೆನಿ ವಿಷಯದಲ್ಲಿ ಜಿಲ್ಲಾಡಳಿಕ್ಕೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆಯೇ ? ಇಲ್ಲವೆಂದಾದರೆ ಕಳೆದೆರಡು ದಿನಗಳಿಂದ ಬಿಗ್‍ಬ್ಯಾಗ್ಸ್ ಅದ್ಯಾಗೆ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಕ್ಷಾದಲ್ಲಿ ಒಂದಿಬ್ಬರು ಪ್ರಯಾಣಸಿದರೆ ಅಥವಾ ಏಳೆಂಟು ಮಂದಿಯ ಮೂಲಕ ಕಾರ್ಯಾಚರಿಸುತ್ತಿರುವ ಸಣ್ಣಪುಟ್ಟ ಕೈಗಾರಿಕಾ ಘಟಕಗಳಿಗೆ ಕಾನೂನು ಬಿಸಿ ಮುಟ್ಟಿಸಿರುವ ಜಿಲ್ಲಾಡಳಿತ ಈ ಕಂಪೆನಿಯತ್ತ ಸುಳಿದಾಡುತ್ತಿಲ್ಲ. ಹಾಗಾದರೆ ಇಂತಹ ವಿಷಯ ಪರಿಸ್ಥಿತಿಯಲ್ಲೂ ದುಡಿದು ದಿನಗಳೆಯುವ ಮಂದಿಗೆ ಒಂದು ಕಾನೂನು, ಹಣವಂತರಿಗೆ ಮತ್ತೊಂದು ಕಾನೂನೇ ? ಈ ವೈರುಧ್ಯಕ್ಕೆ ಇಲ್ಲಿ ಆಳುವ ಪಕ್ಷದ ನಾಯಕರ ಕುಮ್ಮಕ್ಕು ಇರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಗಂಜಿಮಠದ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುವಂತಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಈಗಾಗಲೇ ಎರಡು ಬಾರಿ ಮುಚ್ಚಲ್ಪಟ್ಟ ಬಿಗ್‍ಬ್ಯಾಗ್ಸ್ ಸೋಮವಾರ ಏಕಾಏಕಿಯಾಗಿ ಮತ್ತೊಂದು ಬಾರಿ ತೆರೆದಿದೆ. ಮಾಧ್ಯಮಗಳ ವರದಿ ಮಾಡಿದರೂ, ಬಿಗ್‍ಬ್ಯಾಗ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಸೋಮವಾರ ತಹಶೀಲ್ದಾರ್ ತಂಡ ಕಂಪೆನಿಗೆ ಭೇಟಿ ನೀಡಿದ್ದರೆ, ಮಂಗಳವಾರ ಎಸಿ ತಂಡ ಭೇಟಿ ನೀಡಿ ಕಂಪೆನಿ ಮಾಲಕರೊಂದಿಗೆ ಮಾತುಕತೆ ನಡೆಸಿ ಮರಳಿದೆ. ಕಂಪೆನಿ ತೆರೆಯಲು ಇದೇ ಎಸಿ ಅನುಮತಿ ನೀಡಿದ್ದರು ಎಂದು ನಿನ್ನೆ ತಹಶೀಲ್ದಾರ್ ತಿಳಿಸಿದ್ದರು. ಮಂಗಳವಾರ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿದ ಎಸಿ ಮದನ್ ಮೋಹನ್, “ಕೇಂದ್ರ ಸರ್ಕಾರ ಎ. 15ರಂದು ಹೊರಡಿಸಿರುವ ಪರಿಷ್ಕøತ ಮಾರ್ಗಸೂಚಿಯನ್ವಯ ಕಂಪೆನಿಗೆ ಅನುಮತಿ ನೀಡಲಾಗಿದೆ” ಎಂದಿದ್ದರು.
ಮಂಗಳವಾರ ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾಗಿರುವ ಸುದ್ದಿಯ ಪ್ರಕಾರ, ಬಿಗ್‍ಬ್ಯಾಗ್ಸ್ ಕಂಪೆನಿಗೆ ರಾಜ್ಯ ಸರ್ಕಾರ ಅನುಮತಿ ಮೇರೆಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ ಎಂಬ ವಿಷಯವನ್ನು ಕಂಪೆನಿ ಮಾಲಕರೇ ಸ್ಪಷ್ಟಪಡಿಸಿದ್ದಾರೆ. “ಎ. 20ರ ಬಳಿಕ ಲಾಕ್‍ಡೌನ್ ಇನ್ನಷ್ಟು ಟಫ್ ಆಗಲಿದೆ” ಎಂದು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. `ಲಾಕ್‍ಡೌನ್ ಟಫ್’ ಎಂದರೆ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಆಗದ ಸಾವಿರಾರು ಕಾರ್ಮಿಕರಿರುವ ಬಿಗ್‍ಬ್ಯಾಗ್‍ನಂತಹ ಪ್ರಭಾವಿ ಕಂಪೆನಿಗಳಿಗೆ ಕೆಲಸಕ್ಕೆ ಅನುಮತಿ ನೀಡಿರುವುದೇ ?!
ಇಲ್ಲಿ ಅಕ್ಕಿ ತುಂಬಿಸುವ ಚೀಲ, ಸ್ಯಾನಿಟರಿ ಮಾಸ್ಕ್ ತಯಾರಿಸಲಾಗುತ್ತಿದೆ ಎಂದು ಕಂಪೆನಿಯ ಮಾಲಕರು ಅಧಿಕಾರಿಗಳ ತಂಡಕ್ಕೆ ಸ್ಪಷ್ಟನೆ ನೀಡಿದರೆ ಅವರು ನಂಬುತ್ತಾರೆ. ಆದರೆ, ವಾಸ್ತವದಲ್ಲಿ ಇಲ್ಲಿ ವಿದೇಶಕ್ಕೆ ರಫ್ತಾಗುವಂತಹ ಚೀಲ ತಯಾರಿಸಲಾಗುತ್ತದೆ. ದಿನಂಪ್ರತಿ ಕಂಟೇನರ್‍ಗಳಲ್ಲಿ ಕಚ್ಚಾವಸ್ತು ಪೂರೈಕೆಯಾಗುತ್ತಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಕ್ಕಿ ಮಿಲ್‍ಗಳೇ ಮುಚ್ಚಲ್ಪಟ್ಟಿರುವಾಗ ಇನ್ಯಾರಿಗೆ ಈ ಚೀಲ ತಯಾರಿಸಿಡುವುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೆಂಪು ವಲಯ'(ರೆಡ್ ಝೋನ್) ಎಂದೇ ಗುರುತಿಸಲ್ಪಟ್ಟ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈ ಗಂಜಿಮಠವಿದೆ. ಗಂಜಿಮಠ ಸುತ್ತಲ ಪ್ರದೇಶದ ಮನೆಮಂದಿ ಕಳೆದ ಒಂದು ತಿಂಗಳಿಂದ ಕೆಲಸವಿಲ್ಲದೆ ಮನೆಯೊಳಗೆಯೇ ಲಾಕ್‍ಡೌನ್ ಆಗಿದ್ದರೂ, ಬಿಗ್‍ಬ್ಯಾಗ್ ಮಾತ್ರ ಪದೇ ಪದೇ ಎಸಿ ಆದೇಶ ಮುಂದಿಡುತ್ತ ಅನ್ಯ ಕಾರ್ಮಿಕ ವಲಯದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಾಳೆಯಿಂದ ನಾವೂ ಕೆಲಸಕ್ಕೆ ಹೋಗುತ್ತೇವೆ ಎನ್ನುವ ಬಡ ಕಾರ್ಮಿಕರು ಬಸ್, ರಿಕ್ಷಾ ಪುನರಾರಂಭಕ್ಕೆ ಯಾಕೆ ಅನುಮತಿ ನೀಡುವುದಿಲ್ಲ.
ನಮಗೆ ಮಾತ್ರ ಲಾಕ್‍ಡೌನ್ ಕಾಯ್ದೆಯೇ ? ಜಿಲ್ಲಾಧಿಕಾರಿಗಿಂತಲೂ ಮೇಲೆ ಎಸಿಯೇ ” ಎಂದು ಪ್ರಶ್ನಿಸಿದ್ದಾರೆ. ಏನೇ ಇದ್ದಾಗಲೂ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶ್ರೀಮಂತ ವರ್ಗ ಹಾಗೂ ಬಡವರ್ಗದ ಬಗ್ಗೆ ನೀತಿ ಹೊಂದಿದೆ ಎಂಬ ಆರೋಪ ಕೇಳಿ ಬಂದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎ. 20ರ ಬಳಿಕ ಕೆಲಸ ಮಾಡಲಿದ್ದೇವೆ. ಇಲ್ಲವೇ ಕೆಲಸದ ಹಕ್ಕಿಗಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂಬ ಎಚ್ಚರಿಕೆ ಧ್ವನಿ ಕೇಳಿ ಬಂದಿದೆ.
ಸೋಮವಾರ ಗಂಜಿಮಠ ಆಸುಪಾಸಿನ ನಾಗರಿಕರು ಗಂಜಿಮಠ ಗ್ರಾಮ ಪಂಚಾಯತ್‍ನಲ್ಲಿ ಬಿಗ್‍ಬ್ಯಾಗ್ಸ್ ವಿರುದ್ಧ ದೂರು ನೀಡಿದ್ದಾರೆ. ಎಸಿ ತಂಡ ಬಂದು ಹೋಗಿದೆ. ಕಂಪೆನಿ ಕೆಲಸ ಮುಂದುವರಿಸಿದೆ. ಎಸಿ ವರದಿ ಪರಿಶೀಲನೆ ಹೊತ್ತಿಗೆ ಲಾಕ್‍ಡೌನ್ ಮುಗಿಯಲಿದೆ. ಲಾಕ್‍ಡೌನ್ ಆದೇಶ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿದೆ ಎಂಬ ಆರೋಪದಿಂದ ಜಿಲ್ಲಾಡಳಿತ ಹೊರಬಂದು ತಕ್ಷಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
