ಕೈಕಂಬ: ತಲಪಾಡಿಯಿಂದ ಬಾಡಿಗೆ ಮನೆಗೆ ವಾಪಾಸ್ ಬಂದ ಬಾಡಿಗೆದಾರಿಗೆ ಬಾಗಿಲು ತೆರೆಯಬೇಡಿ ಎಂದು ಹೇಳಿದ ಮನೆ ಮಾಲೀಕರ ಎಚ್ಚರಿಕೆಯನ್ನು ತಿರಸ್ಕರಿಸಿ ಮನೆಯ ಬೀಗ ಒಡೆದ ಕಿಡಿಗೇಡಿಗಳು ಪೊಲೀಸರು ಬರುವಷ್ಟರಲ್ಲಿ ಪಲಾಯನಗೈದ ಘಟನೆಯೊಂದು ಶುಕ್ರವಾರ ಸಾಯಂಕಾಲ ಕುಪ್ಪೆಪದವಿನಲ್ಲಿ ನಡೆದಿದೆ. 

ಘಟನೆಯ ವಿವರ:
ಮೂಡಬಿದ್ರಿ ಸಮೀಪದ ತೋಡಾರು ಎಂಬಲ್ಲಿಯ ನಿವಾಸಿ ಮಹಮ್ಮದ್ ಜುಬೈರ್ ಎಂಬಾತ ಕುಪ್ಪೆಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು, ಜುಬೈರ್ ಕಳೆದ 2 ತಿಂಗಳ ಹಿಂದೆ ತನ್ನ ಪತ್ನಿಯನ್ನು ಆಕೆಯ ತಾಯಿ ಮನೆ ಇರುವ ತಲಪಾಡಿ ಸಮೀಪದ ಕೆ.ಸಿ.ರೋಡ್ ಗೆ ಕರೆದು ಕೊಂಡು ಹೋಗಿದ್ದರು, ಅನಂತರ ಶುಕ್ರವಾರದವರೆಗೆ ಕುಪ್ಪೆಪದವಿಗೆ ಬಂದಿರಲಿಲ್ಲ, ಶುಕ್ರವಾರ ಜುಬೈರ್ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಬಾಡಿಗೆ ಮನೆಗೆ ಬಂದಿದ್ದರು, ಈ ವೇಳೆ ಮನೆ ಮಾಲೀಕರು ಸದ್ಯ ಕೊರೊನಾ ಸೋಂಕು ಹರಡುತ್ತಿರುವುದರಿಂದ, ಕೆ.ಸಿ.ರೋಡ್ ಕೇರಳ ಗಡಿಯಾಗಿದ್ದು ಜುಬೈರ್ ಅಲ್ಲಿಂದ ಬಂದಿರುವುದರಿಂದ ಮತ್ತು ಜತೆಗೆ ಇನ್ನಿಬ್ಬರು ಇದ್ದುದರಿಂದ ಜುಬೈರ್ ಗೆ ಮನೆಯಲ್ಲಿ ಇರಬೇಡಿ ವಾಪಾಸ್ ಹೋಗಿ ಎಂದು ಸೂಚಿಸಿದ್ದರು. ಆದರೆ ಜುಬೈರ್ ಮಾಲೀಕರ ಸೂಚನೆಯನ್ನು ಧಿಕ್ಕರಿಸಿ ಮನೆಯ ಬೇಗ ಒಡೆದು ಒಳ ಪ್ರವೇಶಿಸಿದ್ದರು,. ಈ ವಿಚಾರ ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಧಿಕಾರಿಗಳಿಗೆ ತಿಳಿದು ಸ್ಥಳಕ್ಕೆ ಬಂದು ಜುಬೈರ್ ಮತ್ತು ಸಂಗಡಿಗರನ್ನು ವಿಚಾರಿಸಿದಾಗ, ತಾನು ಕೆ.ಸಿ.ರೋಡಿನಿಂದ ತೋಡಾರಿಗೆ ಬಂದು ತಿಂಗಳೇ ಕಳೆದಿದೆ ನಾನು ತೋಡಾರಿನ ನನ್ನ ಮನೆಯಲ್ಲಿದ್ದೆ, ನನ್ನ ಜತೆಯಲ್ಲಿ ಬಂದವರು ಕೇರಳದವರಲ್ಲ ಎಂದು ಸಮಜಾಯಿಸಿ ನೀಡಿದ್ದಾನೆ.
ಈ ಮದ್ಯೆ ಮನೆ ಮಾಲೀಕರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬರುವಷ್ಟರಲ್ಲಿ ಜುಬೈರ್ ಮತ್ತು ಇನ್ನಿಬ್ಬರು ಮನೆಯ ಮುಂಬಾಗದಲ್ಲಿ ಇದ್ದ ಜನರ ಅರಿವಿಗೆ ಬಾರದಂತೆ ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ, ಪೊಲೀಸರು ಬಂದು ಮನೆ ಪ್ರವೇಶಿಸಿದಾಗಲೇ ಪರಾರಿಯಾದ ಬಗ್ಗೆ ತಿಳಿದು ಬಂತು. ಮನೆಯಲ್ಲಿ ಅದ್ಯಪಾಡಿ ವಿಳಾಸ ಹೊಂದಿರುವ ಆಧಾರ್ ಕಾರ್ಡುಗಳು ದೊರೆತಿವೆ, ಪೊಲೀಸರು ಹುಡುಕಾಟ ನಡೆಸಿದ್ದು ಕಿಡಿಗೇಡಿಗಳು ಪತ್ತೆಯಾಗಿಲ್ಲ.
ಪಲಾಯನಕ್ಕೆ ಕಾರಣವೇನು?
ಬಲ್ಲ ಕೆಲವು ಮೂಲಗಳ ಪ್ರಕಾರ ಜುಬೈರ್ ಮೇಲೆ ಹಲವು ಕೇಸುಗಳಿದ್ದು, ಜತೆಯಲ್ಲಿದ್ದವರು ಕೂಡ ಯಾವುದೋ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರಾಗಿದ್ದು ಕೇರಳದ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದು, ಮತ್ತೆ ಇಲ್ಲಿನ ಪೊಲೀಸರ ಕೈಗೆ ಸಿಕ್ಕಿದರೆ ಉಳಿಗಾಲವಿಲ್ಲ ಎಂದು ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಇಲ್ಲವಾದಲ್ಲಿ ಪೊಲೀಸರು ಬರುವಾಗ ಕಾಲು ಕಿತ್ತಿರುವುದೇಕೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಲಾಯನಗೈದಿರುವ ಕಿಡಿಗೇಡಿಗಳು ಮನೆಯ ಹಿಂಬಾಗದಲ್ಲಿರುವ ಶಾಲಾಮೈದಾನದಿಂದ ಸ್ಥಳೀಯ ಆಟೋ ರಿಕ್ಷಾವೊಂದರಲ್ಲಿ ಪಲಾಯನಗೈದಿರುವುದಾಗಿ ತಿಳಿದುಬಂದಿದ್ದು, ಇವರು ಕುಪ್ಪೆಪದವು ಸುತ್ತಮುತ್ತ ಎಲ್ಲೊ ಅಡಗಿಕೊಂಡಿದ್ದಾರೆ ಅಥವಾ ಇರುವೈಲು ಮೂಲಕ ತೋಡಾರಿಗೆ ಪರಾರಿಯಾಗಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಮನೆಗೆ ಪೊಲೀಸರು ಬೀಗ ಜಡಿದಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

