ಮಂಗಳೂರು: ಮಂಗಳೂರಿನ ಬಿಜೈ ಸಮೀಪದ  ಚಂದ್ರಿಕಾ ಲೇಔಟ್ ಸಮಿಪದ ನಿವಾಸಿ ಮೆಸ್ಕಾಂ ಇಂಜಿನಿಯರ್ ಜಗದೀಶ್ ರಾವ್ ಕೊಲೆಪ್ರಕರಣದ ಆರೋಪಿಗಳಿಬ್ಬರನ್ನು ಕದ್ರಿಪೊಲೀಸರು ಬಂಧಿಸಿದ್ದಾರೆ.  ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ನಿವಾಸಿ ಸಿದ್ದಪ್ಪ ಯಾನೆ ಸಿದ್ದು(22), ದಾವಣಗೆರೆಯ ನಿಟ್ಟೋಳಿ ಸೈಯದ್ ಫೀರ್ ಬಡಾವಣೆ ನಿವಾಸಿ ಮುರ್ತುಜ ಖಾದ್ರಿ ಯಾನೆ ರಫೀಕ್(27) ಎಂಬವರು ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಉರ್ವಾ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ನಗರದ ಅಳಿಕೆ ಹಾಗೂ ಕದ್ರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ತಾವೇ ನಡೆಸಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆ, ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಏಳು ಮಂದಿ ಖದೀಮರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರಲ್ಲಿ ಉರ್ವಾ ಹಾಗೂ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮೆಸ್ಕಾಂ ಆಫೀಸರ್ ಮತ್ತು ವೃದ್ಧೆಯನ್ನು ಕೊಲೆಗೈದ ಆರೋಪಿಗಳೂ ಸೇರಿದ್ದಾರೆ.

ಕಳೆದ ಆಗಸ್ಟ್ ಒಂದರಂದು ಉರ್ವಾ ಠಾಣಾ ವ್ಯಾಪ್ತಿಯ ಅಳಿಕೆ ಎಂಬಲ್ಲಿ ಸುಶೀಲಾ(75) ಎಂಬ ವೃದ್ಧೆಯನ್ನು ಕತ್ತು ಸೀಳಿ ಕೊಲೆಗೈಯಲಾಗಿತ್ತು. ಈ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿರಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿರುವಂತೆಯೇ ಸೆ.20ರಂದು ಕದ್ರಿಯ ಮೆಸ್ಕಾಂ ಆಫೀಸರ್ ಜಗದೀಶ್ ರಾವ್ ಅವರನ್ನು ಮನೆಯಲ್ಲೇ ಕತ್ತು ಸೀಳಿ ಕೊಲೆಗೈಯಲಾಗಿತ್ತು. ಮೇಲ್ನೋಟಕ್ಕೆ ಎರಡೂ ಕೊಲೆಗಳನ್ನು ಒಂದೇ ತಂಡ ಮಾಡಿರಬೇಕೆಂದು ಶಂಕಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

bejai (1)

bejai (2)

bejai (3)

jagadishrao

 
ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದರೆ ಕೊಲೆ:
ಬಂಧಿತ ಆರೋಪಿಗಳಲ್ಲಿ ಸಿದ್ದಪ್ಪ ಮೆಸ್ಕಾಂ ಆಫೀಸರ್ ಜಗದೀಶ್ ರಾವ್ ಅವರ ಮನೆಗೆ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಜಗದೀಶ್ ರಾವ್ ಎಚ್ಚರಗೊಂಡಿದ್ದು ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಸಿದ್ದಪ್ಪ ಅವರ ಕತ್ತುಸೀಳಿ ಕೊಲೆಗೈದು ಪರಾರಿಯಾಗಿದ್ದ. ಕಳ್ಳತನಕ್ಕೆ ಹೊಂಚುಹಾಕಿ ಮನೆಮಂದಿ ಎಚ್ಚರಗೊಂಡು ಪ್ರತಿರೋಧ ವ್ಯಕ್ತಪಡಿಸಿದರೆ ಅವರನ್ನು ಕೊಂದು ಪರಾರಿಯಾಗುವುದನ್ನು ಹಂತಕರು ಕರಗತ ಮಾಡಿಕೊಂಡಿದ್ದರು ಎಂದು ಕಮಿಷನರ್ ಮಾಹಿತಿ ನೀಡಿದರು.

ಇದೇ ರೀತಿ ಸಿದ್ದಪ್ಪ ಹಾಗೂ ರಫೀಕ್ ಉರ್ವಾ ಠಾಣಾ ವ್ಯಾಪ್ತಿಯ ಅಳಿಕೆ ನಿವಾಸಿ ಸುಶೀಲಾ ಮನೆಗೆ ರಾತ್ರಿ ವೇಳೆ ನುಗ್ಗಿದ್ದ. ಈ ವೇಳೆ ವೃದ್ಧೆ ಸುಶೀಲಾ ಪ್ರತಿರೋಧ ವ್ಯಕ್ತಪಡಿಸಿದ್ದು, ಹಂತಕರು ಅವರನ್ನು ಕೊಲೆಗೈದು ಕಾರ್ ಸಮೇತ ಪರಾರಿಯಾಗಿದ್ದರು. ಮರುದಿನ ಕಾರನ್ನು ಬಿಜೈನ ಹೊಂಡಾ ಶೋರೂಂ ಬಳಿ ಪತ್ತೆಹಚ್ಚಲಾಗಿತ್ತು. ಇವರಿಬ್ಬರೂ ಸೇರಿಕೊಂಡು ನಗರದಲ್ಲಿ ಹಲವಾರು ಕಳ್ಳತನ ಪ್ರಕರಣ, ಎರಡು ಕೊಲೆ ಹಾಗೂ ಒಂದು ಶಸ್ತ್ರಾಸ್ತ್ರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಕಮಿಷನರ್ ಹಿತೇಂದ್ರ ತಿಳಿಸಿದ್ದಾರೆ.

ಬಂಧಿತರಿಂದ ಚಿನ್ನದ ಸರ, ರಿವಾಲ್ವರ್, 16 ರೌಂಡ್ಸ್, ಐದು ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿರಿಸಿರುವ ಚಿನ್ನಾಭರಣ ವಶಪಡಿಸಿಕೊಳ್ಳಲು ಬಾಕಿಯಿದೆ ಎಂದು ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಕುಖ್ಯಾತ ದರೋಡೆಕೋರರ ಸೆರೆ:
ಸೋಮವಾರ ಮುಂಜಾನೆ ಮಂಗಳೂರು ಪೂರ್ವ ಠಾಣಾ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಮರೋಳಿ ಜೋಡುಕಟ್ಟೆ ಸಮೀಪ ಅನುಮಾನಾಸ್ಪದವಾಗಿ ನಿಂತಿದ್ದ ಎರಡು ಕಾರುಗಳನ್ನು ಪರಿಶೀಲನೆ ನಡೆಸಿದ ಸಂದರ್ಭ ದರೋಡೆಗೆ ಹೊಂಚು ಹಾಕುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಫರಂಗಿಪೇಟೆ-ಪುದು ಪುಂಚಮೆ ಹೌಸ್ ನಿವಾಸಿ ಇಲಿಯಾಸ್ ಎಂಬವರ ಪುತ್ರ ಮುಹಮ್ಮದ್ ಅಜೀಂ ಯಾನೆ ದಿಲ್ ವಾಲ(21), ಕೃಷ್ಣಾಪುರ-ಕಾಟಿಪಳ್ಳ ಏಳನೇ ಬ್ಲಾಕ್ ನಿವಾಸಿ ಇಕ್ಬಾಲ್ ಎಂಬವರ ಪುತ್ರ ಅಹಮ್ಮದ್ ಸಾದಿಕ್ ಯಾನೆ ಸಾದಿಕ್(19), ಕಾಟಿಪಳ್ಳ ಎಂಟನೇ ಬ್ಲಾಕ್ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ನಿಸಾರ್ ಹುಸೇನ್ ಯಾನೆ ನಿಚ್ಚು(23), ಕಾಟಿಪಳ್ಳ ಏಳನೇ ಬ್ಲಾಕ್ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಹಸನಬ್ಬ ಯಾನೆ ನೌಶಾದ್(23) ಹಾಗೂ ಕುಂದಾಪುರ ತಾಲೂಕು ತಗ್ಗರ್ಸೆ ನಿವಾಸಿ ಮಾಚ ಪೂಜಾರಿ ಎಂಬವರ ಪುತ್ರ ಶಶಿಧರ ವೈ(30) ಎಂದು ಹೆಸರಿಸಲಾಗಿದೆ.

ಬಂಧಿತರಿಂದ ಕೆ.ಎ. 19 ಎಂ.ಬಿ. 5607 ನಂಬ್ರದ ರಿಟ್ಜ್ ಕಾರ್, ಕೆ.ಎ. 19 ಪಿ. 9160 ನಂಬ್ರದ ಕಪ್ಪುಬಣ್ಣದ ಅಲ್ಟೋ ಕಾರ್ ಸ್ವಾಧೀನಪಡಿಸಿಕೊಳ್ಳಲಾಗಿದೆ. ಐದು ಮಚ್ಚು, ಎರಡು ಮೆಣಸಿನ ಹುಡಿ ಪ್ಯಾಕೆಟ್, ನಾಲ್ಕು ಮೊಬೈಲ್ ಫೋನ್ ಹಾಗೂ 12,750 ರೂ. ನಗದು ಹಣ ಪಶಪಡಿಸಿಕೊಳ್ಳಲಾಗಿದೆ.

ಇವರು ಕಾರನ್ನು ಬಾಡಿಗೆಗೆ ಪಡೆದು ಮಾರಕಾಯುಧಗಳೊಂದಿಗೆ ಹೆದ್ದಾರಿಯಲ್ಲಿ ಕಾದು ಕುಳಿತು ಲಾರಿ ಚಾಲಕರನ್ನು ದರೋಡೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮೂರು ಹೆದ್ದಾರಿ ಸುಲಿಗೆ ಪ್ರಕರಣ, ಉಪ್ಪಿನಂಗಡಿ ಸಮೀಪದ ಉದನೆ ಎಂಬಲ್ಲಿ ನಡೆದ ಹೆದ್ದಾರಿ ಸುಲಿಗೆ ಪ್ರಕರಣ ಹಾಗೂ ಶಿರಾಡಿ ಬಳಿ ನಡೆದಿದ್ದ ಎರಡು ಹೆದ್ದಾರಿ ಸುಲಿಗೆ ಪ್ರಕರಣ ಸೇರಿದಂತೆ ಒಟ್ಟು ಏಳು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಮಾಹಿತಿ ನೀಡಿದರು.
ಪೊಲೀಸ್ ಕಮಿಷನರ್ ಹಿತೇಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಆಯುಕ್ತರಾದ ಕೆ.ವಿ.ಜಗದೀಶ್, ಎನ್.ವಿಷ್ಣುವರ್ಧನ ಮತ್ತು ಸಹಾಯಕ ಪೊಲೀಸ್ ಆಯುಕ್ತ ತಿಲಕಚಂದ್ರ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಉರ್ವಾ ಪೊಲೀಸ್ ನಿರೀಕ್ಷಕ ರಾಮಚಂದ್ರ ಮಾಳೇದವರ್, ಪೊಲೀಸ್ ಉಪನಿರೀಕ್ಷಕ ಪೂವಪ್ಪ ಹೆಚ್.ಎಂ., ವಿಶಾಲಾಕ್ಷಿ, ಎಎಸ್ ಐ ಕರುಣಾಕರ, ಸಿಬ್ಬಂದಿ ಓಂದಾಸ್, ಸುಧಾಕರ್, ಮನೋಹರ, ಸಂತೋಷ್ ಸಸಿಹಿತ್ಲು, ಪ್ರಮೋದ್ ಮೇರಿಹಿಲ್, ಕೇಶವ, ಕಿಶೋರ್, ರವಿ, ಕಾಂತರಾಜ್, ಮಂಜುನಾಥ್, ರಾಮಾಂಜನೇಯ, ನಾಗರಾಜ್ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *