ಕೈಕಂಬ:ಮಾ. 9ರಂದು ವೇಣೂರಿಂದ ಏಕಶಿಲೆ ದಿಬ್ಬದ ಮೆರವಣಿಗೆ ವಿಗ್ರಹಕ್ಕೆ ಭಕ್ತರಿಂದ ಮುಕ್ತ ಪ್ರಾರ್ಥನೆ ಆಶಯ ಮುಂದಿನ ಎರಡು ಸಂವತ್ಸರದೊಳಗೆ ಗುರುಪುರ ಗೋಳಿದಡಿಗುತ್ತಿನ ಚಾವಡಿಗೆ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ಬೃಹತ್ ಶ್ರೀ ಮಹಾಕಾಲೇಶ್ವರ ಬಯಲು ಆಲಯ ನಿರ್ಮಾಣಗೊಳ್ಳಲಿದೆ. ಪ್ರಸಕ್ತ ಉತ್ತರ ಭಾರತದ ಉಜ್ಜೈನಿಯಲ್ಲಿ ಮಾತ್ರ ಮಹಾಕಾಲೇಶ್ವರ ದೇವಾಲಯವೊಂದಿದ್ದು, ಗುರುಪುರದಲ್ಲಿ ನಿರ್ಮಾಣಗೊಳ್ಳಲಿರುವ ಶಿವನ ಈ ಏಕಶಿಲಾ ದೇವಾಲಯ ದಕ್ಷಿಣ ಭಾರತಕ್ಕೆ ಪ್ರಥಮವಾಗಲಿದೆ.

gur-mar-4-mahakaleshwara-1

ವೇಣೂರಿಂದ ಫಲ್ಗುಣಿ ನದಿ ತಟಕ್ಕೆ ಏಕಶಿಲೆ ಮೆರವಣಿಗೆ

ವೇಣೂರಿಗೆ ಹತ್ತಿರದ ಕಾಶಿಪಟ್ಣ ಗ್ರಾಮದ ಕಿರೋಡಿಯಲ್ಲಿ ಉತ್ಖನನ ಮಾಡಿ ಹೊರತೆಗೆಯಲಾದ 22 ಅಡಿ ಉದ್ದ, ಒಂಬತ್ತು ಅಡಿ ಅಗಲ ಹಾಗೂ ಆರಡಿ ದಪ್ಪಗಿನ ಏಕಶಿಲಾ ದಿಬ್ಬವನ್ನು ಮಾರ್ಚ್ 9ರಂದು ಗುರುಪುರ ಗೋಳಿದಡಿಗುತ್ತಿನಲ್ಲಿ ಸಂಕಲ್ಪಿಸಿದಂತೆ ಸರಳ, ಅಷ್ಟೇ ವಿಶಿಷ್ಟವಾದ ವಿಧಿ-ವಿಧಾನ ನೆರವೇರಿಸಿ ಗುರುಪುರಕ್ಕೆ ತರಲಾಗುವುದು. ಮುಂಜಾನೆ 5 ಗಂಟೆಗೆ ಟ್ರಾಲಿಯಲ್ಲಿಟ್ಟು ವೇಣೂರಿಂದ ಹೊರಡಲಿರುವ ಏಕಶಿಲಾ ಮೆರವಣಿಗೆ ಹೊಸಂಗಡಿ, ಮೂಡಬಿದ್ರಿ, ಮಿಜಾರು, ಎಡಪದವು, ಗಂಜಿಮಠ, ಕೈಕಂಬ, ಗುರುಪುರ ಜಂಕ್ಷನ್ ಮೂಲಕ ಸಂಜೆ 3-4 ಗಂಟೆಯೊಳಗೆ ಫಲ್ಗುಣಿ ನದಿ ತಟ ತಲುಪಲಿದೆ.

gur-mar-4-mahakaleshwara

ವಿಶಿಷ್ಟ ಬಯಲು ಆಲಯ :

ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗೋಳಿದಡಿಗುತ್ತು ಗುರುಪುರ ಇದರ ಆಡಳಿತ ಟ್ರಸ್ಟಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಉಸ್ತುವಾರಿ,ಪ್ರಶಾಂತ್ ಜೆ ಶೆಟ್ಟಿ ಅಧ್ಯಕ್ಷತೆ ಹಾಗೂ ಸ್ಥಳೀಯ ಸಂಸದ, ಶಾಸಕರು, ಸಮಾಜದ ಗಣ್ಯರ ಮುಂದಾಳತ್ವದ ಶ್ರೀ ಮಹಾಕಾಲೇಶ್ವರ ಸಾನಿಧ್ಯ ಪುನರುತ್ಥಾನ ಸಮಿತಿ ಮುಖೇನ ಪುನರುತ್ಥಾನಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದ ಮಾರ್ಗದರ್ಶಕರಾಗಿದ್ದಾರೆ. 2022ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿರುವ ವಿಶಿಷ್ಟವೂ, ವಿನೂತನವೂ ಆಗಿರುವ ಬಯಲು ದೇವಾಲಯ ತಲೆ ಎತ್ತಿ ನಿಲ್ಲಲಿದೆ.

ನದಿ ತೀರದಲ್ಲಿ ಮೈದಾಳಲಿರುವ ಆರು ಕೈಗಳಿರುವ ಶ್ರೀ ಮಹಾಕಾಲೇಶ್ವರನ ದಿವ್ಯಮೂರ್ತಿ 18 ಅಡಿ ಇದ್ದರೆ, ವಿಗ್ರಹದ ಪದ್ಮಪೀಠ ಎರಡು ಅಡಿ ಎತ್ತರವಿರುತ್ತದೆ. ಒಟ್ಟು 20 ಅಡಿ ಎತ್ತರದ ಈ ವಿಗ್ರಹ, ಭೂಮಿಯಿಂದ 20 ಅಡಿ ಎತ್ತರದ ಶಿಲಾಮಯ ಆಲಯದಲ್ಲಿ ಮೇಲ್ಗಡೆ ನೆಲೆ ಕಾಣಲಿದೆ. ಅಂದರೆ, ಬಯಲು ಆಲಯದ ವಿಗ್ರಹ ಭೂಮಿಯಿಂದ ಒಟ್ಟು 40 ಅಡಿ ಎತ್ತರದಲ್ಲಿರುತ್ತದೆ.

gur-mar-4-mahakaleshwar-3

ದೇವರ ಸ್ಪರ್ಶಿಸಿ ಭಕ್ತರಿಂದ ಪೂಜೆ

ಇಲ್ಲಿಗೆ ಆಗಮಿಸುವ ಭಕ್ತರು ದೇವಾಲಯದ ಮೇಲೇರಿ, ಶಿವನ ಸ್ಪರ್ಶಿಸಿ ಪೂಜಿಸುವ ವಿಶಿಷ್ಟ ವ್ಯವಸ್ಥೆ ಇರುತ್ತದೆ. ಇಂತಹ ವ್ಯವಸ್ಥೆ ಬೇರೆಲ್ಲೂ ಇಲ್ಲ. ವೇಣೂರಿನ ಕೃಷಿಕ ಕುಟುಂಬದ ವೀರಪ್ಪ ಪೂಜಾರಿ ಮತ್ತು ಸಹೋದರರು ತಮ್ಮ ವರ್ಗ ಜಾಗದಲ್ಲಿರುವ ಈ ಏಕಶಿಲೆ ಉಚಿತವಾಗಿ ನೀಡಿದ್ದಾರೆ. ಬೆಳ್ತಂಗಡಿ ಲಾೈಲದ ಮುಂಜುಶ್ರೀ ಶಿಲ್ಪಕಲಾ ಶಾಲೆಯ ವೆಂಕಟೇಶ ಆಚಾರ್ಯ ಮತ್ತು ಶಿಲ್ಪಕಲಾ ಅನುಭವಿ ತಂಡದವರು ಮುಂದಿನ ಒಂದೂವರೆ ವರ್ಷದಲ್ಲಿ ಭವ್ಯ ವಿಗ್ರಹ ನಿರ್ಮಿಸಲಿದ್ದಾರೆ.

ಭಾರತದಲ್ಲಿ ಉಜ್ಜೈನಿಯಲ್ಲಿ ಮಾತ್ರ ಶ್ರೀ ಮಹಾಕಾಲೇಶ್ವರ ದೇವಸ್ಥಾನವಿದೆ. ಇದನ್ನು ಹೊರತುಪಡಿಸಿದರೆ, ಇನ್ನೇನು ನಿರ್ಮಾಣಗೊಳ್ಳಲಿರುವ ಇಲ್ಲಿನ ದೇವಾಲಯ ದಕ್ಷಿಣ ಭಾರತದಲ್ಲಿ ಪ್ರಥಮ ಹಾಗೂ ದೇಶದಲ್ಲಿ ಎರಡನೇಯದ್ದಾಗಲಿದೆ. 20 ಅಡಿ ಎತ್ತರದ ದೇವಾಲಯದ ಮೇಲ್ಗಡೆ 20 ಅಡಿ ಎತ್ತರದಲ್ಲಿರುವ(ಒಟ್ಟು 40 ಅಡಿ ಎತ್ತರ) ಶ್ರೀ ಮಹಾಕಾಲೇಶ್ವರನ ವಿಗ್ರಹ ಸ್ಪರ್ಶಿಸಿ ಪೂಜಿಸುವ ಅವಕಾಶ ಭಕ್ತರೆಲ್ಲರಿಗಿರುತ್ತದೆ. ಇದು ಇಲ್ಲಿನ ವಿಶಿಷ್ಟತೆಯಾಗಿದ್ದು, ಇದು ದೈವ ಸಂಕಲ್ಪವಾಗಿದೆ” ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *