ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಕಾಲೇಜಿನ ಪ್ರಥಮ ಪದವಿಯ 65 ಫಲಾನುಭವಿಗಳ ಪೈಕಿ ಹತ್ತು ಮಂದಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಿಸಿ, ಮಾತನಾಡಿ, ಪ್ರತಿಭೆಗೆ ಸೂಕ್ತ ಮನ್ನಣೆ ಸಿಗುವ ಕಾಲ ಈಗ ಬಂದಿದೆ. ಪರಿಶ್ರಮವನ್ನು ಹಾಕಿ ಯಶಸ್ಸಿಗೆ ಶ್ರಮಿಸುವ ವಿದ್ಯಾರ್ಥಿಗಳ ಬೆನ್ನಿಗೆ ಇಂದಿನ ಸರಕಾರವಿದೆ ಎಂದರು. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಂಡು ಜೀವನದಲ್ಲು ಒಳ್ಳೆಯ ಗುಣ ನಡತೆಯನ್ನು ಮೈಗೂಡಿಸಿ ದೇಶದ ಸತ್ಪ್ರಜೆಗಳಾಗಬೇಕು.
ಸರಕಾರ ಯಾವುದೇ ಬೇಧ ಭಾವವಿಲ್ಲದೆ ಎಲ್ಲರಿಗೂ ಲ್ಯಾಪ್‌ಟಾಪ್ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದರು.ಅತಿಥಿಯಾಗಿದ್ದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಮೂಲಕ ಅಗತ್ಯವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಪಸರಿಸಲು ದಾರಿ ಮಾಡಿಕೊಟ್ಟಿದೆ. ಜ್ಞಾನ ಎಂಬುದು ಬೆಳೆಯುವಂತಹದ್ದು, ಅದು ಈ ಮೂಲಕ ವೃದ್ಧಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳಾದ ಮನೀಷ್, ರಕ್ಷಾ ಪ್ರಾರ್ಥಿಸಿದರು. ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹನುಮಂತಯ್ಯ ಲ್ಯಾಪ್‌ಟಾಪ್ ವಿತರಣಾ ನಿರ್ವಹಣೆಯನ್ನು ಮಾಡಿದರು.ಮಾಜಿ ತಾ.ಪಂ. ಸದಸ್ಯ ರತ್ನಕುಮಾರ್ ಚೌಟ, ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾರಾಯಣ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ,ವೇದಿಕೆಯಲ್ಲಿದ್ದರು.ಕಾಲೇಜಿನ ಗ್ರಂಥಪಾಲಕರಾದ ಡಾ.ಶ್ರೀನಿವಾಸ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು. ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಸೀಮಾ ಬೇಗಂ ಕಾರ್ಯಕ್ರಮ ನಿರೂಪಿಸಿದರು.