ಬಂಟ್ವಾಳ: ಜಾಗತಿಕ ತಾಪಮಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅಗತ್ಯವಾಗಿದ್ದು, ಯುವಜನತೆಯನ್ನು ಇದಕ್ಕೆ ಸಜ್ಜುಗೊಳಿಸಬೇಕು ಎಂದು ಮಂಗಳೂರಿನ ಸರ್ಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕರ್ ಭಂಡಾರಿ ಹೇಳಿದರು. ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ನಲ್ಲಿ ಶುಕ್ರವಾರ ನಡೆದ ಸಸ್ಯಶಾಸ್ತ್ರ ಕುರಿತ ಒಂದುದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಾನವನ ದುರಾಸೆಗೆ ಅರಣ್ಯ ಸಂಪೂರ್ಣ ನಾಶವಾಗುತ್ತಿದ್ದು, 2020ರ ಹೊತ್ತಿಗೆ ಮನುಷ್ಯ ಜೀವಿಸಲು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಯುವಪೀಳಿಗೆಗೆ ಇದರ ಗಂಭೀರತೆಯ ಅರಿವು ಮೂಡಿಸಲು ನಾವೆಲ್ಲರೂ ಶ್ರಮವಹಿಸಬೇಕಾಗಿದೆ ಎಂದರು. ಜಗತ್ತಿನ ಅತಿಸೂಕ್ಷ್ಮ ಜೀವ ವೈವಿಧ್ಯದ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 18000ಕ್ಕೂ ಅಧಿಕ ಜೀವ ಪ್ರಭೇದಗಳಿದ್ದು ಅವು ಕೂಡ ವಿನಾಶದಂಚಿನಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಈ ಪರಿಸರ ನಾಶಕ್ಕೆ ಸಂಪೂರ್ಣ ತಡೆವೊಡ್ಡುವ ಕಾರ್ಯ ಯುವಕರಿಂದಾಗಬೇಕು ಈ ಪ್ರದೇಶದಲ್ಲಿರುವ ವಿಶೇಷ ಔಷಧಿಯ ವನಸಂಪತ್ತಿನ ಸಂರಕ್ಷಣೆ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅವರು ಇಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿನ ವಿವಿಧ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಮೇಲ್ಮಟ್ಟಕ್ಕೆರಬೇಕಿದೆ, ಸ್ಥಳಿಯವಾಗಿ ಇರುವ ಹಲವು ಉಪಯುಕ್ತ ಸಸ್ಯ ಮೂಲಿಕೆಗಳ ವೈಜ್ಞಾನಿಕ ಅರಿವು ಪಡೆದು ಅವುಗಳ ಸಂರಕ್ಷಣೆ ಮಾಡಬೇಕಿದೆ ಎಂದರು. ಕಾರ್ಯಕ್ರಮ ಸಂಯೋಜಕ ಡಾ| ವಿನಾಯಕ ಕೆ. ಎಸ್ ಪ್ರಸ್ತಾವನೆಗೈದರು. ಶೃಂಗೇರಿಯ ಜೆ.ಸಿ.ಬಿ.ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ಕುಮಾರಸ್ವಾಮಿ ಉಡುಪ ಅವರು ಜೀವ ವೈವಿಧ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸುಪ್ರೀತ್ ವಂದಿಸಿ, ಸೆಲ್ವಿತ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿಜ್ಞಾನ ವಿಭಾಗದ ಉಪನ್ಯಾಸಕರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

