ಉಡುಪಿ :- ಸ್ವಚ್ಛ ಭಾರತ್ ಫ್ರೆಂಡ್ ನೇತೃತ್ವದಲ್ಲಿ 50 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿರುವ ಸ್ವಚ್ಛತಾ ಪರ್ವದ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಕ್ಲೀನ್ ಉಡುಪಿ ಪ್ರಾಜೆಕ್ಟ್ ಮತ್ತು ಜೇಸಿಐ ಉಡುಪಿ ಸಿಟಿ ಸಹಭಾಗಿತ್ವದಲ್ಲಿ ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮವು ತೆಂಕನಿಡಿಯೂರು ಕಾಲೇಜಿನಲ್ಲಿ ಇಂದು ನಡೆಯಿತು.

IMG-20200127-WA0010

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಸ್ವಚ್ಛತೆಯನ್ನು ಕಾಪಾಡುವುದು ಒಂದು ವ್ಯಕ್ತಿ ಅಥವಾ ಕೆಲವು ಸಂಘಟನೆಗಳಿಗೆ ಮಾತ್ರ ಸೀಮಿತವಾದ ವಿಷಯವಲ್ಲ. ಪ್ರತಿಯೊಬ್ಬರೂ ಕೂಡ ತಾವಿರುವ ಪರಿಸರದ ಸ್ವಚ್ಛತೆಗೆ ಧಕ್ಕೆ ಬರದ ರೀತಿಯಲ್ಲಿ ವರ್ತಿಸುವ ಮೂಲಕ ಸ್ವಚ್ಛ ಭಾರತ ನಿರ್ಮಾಣದ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬೇಕು. ಯುವಜನರು ಸಂಘಟಿತರಾಗಿ ಸಮರ್ಪಣಾ ಮನೋಭಾವದಿಂದ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ ಬರೆದಂತಾಗುತ್ತದೆ.

ವೇಸ್ಟ್ ಟು ವೆಲ್ತ್ ಎಂಬ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡರೆ ನಮ್ಮಲ್ಲಿ ತ್ಯಾಜ್ಯ ಉತ್ಪತ್ತಿಯಾಗುವುದನ್ನು ನಿಯಂತ್ರಿಸಬಹುದು. ಪರಿಸರ ರಕ್ಷಣೆ ಮತ್ತು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪೈಪ್ ಕಾಂಪೋಸ್ಟ್ ಮತ್ತು ಸಾವಯವ ಕೃಷಿಯ ಬಗ್ಗೆ ಹೆಚ್ಚಿನವರು ಗಮನ ಹರಿಸಬೇಕಾದ ಅಗತ್ಯತೆಯಿದೆ. ಸ್ಪಷ್ಟವಾದ ಗುರಿಗಳನ್ನು ಇಡುವ ಮೂಲಕ ಕರ್ತವ್ಯನಿಷ್ಠೆ ಮತ್ತು ಅವಿರತ ಪ್ರಯತ್ನದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಐ.ಎ.ಎಸ್. ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಹೆಚ್ಚಿನ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಇವರ ಮಾದರಿ ಕಾರ್ಯ ಶ್ಲಾಘನೀಯವಾಗಿದೆ. ಜಿಲ್ಲಡಳಿತದ ಪರವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್ ಅವರಿಗೆ ಅಭಿನಂದನೆಗಳು. ಜಿಲ್ಲಾಡಳಿತ ಸಹಯೋಗದಿಂದ ಸ್ವಚ್ಛ ಭಾರತ್ ಫ್ರೆಂಡ್ಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು.

ಸ್ವಚ್ಛತಾ ಸಂಕಲ್ಪದ ಮೊಟ್ಟಮೊದಲ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಶಾಸಕರಾದ ಕೆ. ರಘುಪತಿ ಭಟ್ ರವರು ಮಾತನಾಡುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹಲವಾರು ಯುವಜನರು ಮುಂದಡಿಯನ್ನು ಇಡಲು ಆರಂಭಿಸಿರುವುದು ಶ್ಲಾಘನೀಯ ಬೆಳವಣಿಗೆ. ಸ್ವಚ್ಛ ಭಾರತ್ ಫ್ರೆಂಡ್ಸ್ ಇವರ ಮಾದರಿ ಕಾರ್ಯ ಇದೇ ರೀತಿ ಮುಂದುವರಿಯಲಿ. ನೂರು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಜನರಲ್ಲಿ ಪರಿಸರ ರಕ್ಷಣೆಯ ಕಾಳಜಿಯನ್ನು ಹುಟ್ಟು ಹಾಕುವಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು. ಇತ್ತೀಚಿನ ದಿನಗಳಲ್ಲಿ ಪರಿಸರ ರಕ್ಷಣೆಯ ಒಲವು ಮತ್ತು ಇದರ ಬಗ್ಗೆ ಸುತ್ತಮುತ್ತಲಿನ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವ ವಿಚಾರ ಸಂಘ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದೊಂದಿಗೆ ಸಂಘ ಸಂಸ್ಥೆಗಳ ಪರಿಣಾಮಕಾರಿಯಾದ ಸಹಭಾಗಿತ್ವದ ಫಲಿತವು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಟ್ಟೆಯ ಕೈಚೀಲಗಳನ್ನು ಮತ್ತು ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ನೆರೆದವರಿಗೆ ವಿತರಿಸಲಾಯಿತು.

ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಸ್ವಚ್ಛತೆಯ ಪರಿಕಲ್ಪನೆಯನ್ನು ಯುವಜನರ ಮನಸ್ಸಿನಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮನೋಭಾವನೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಬೇಕು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರದ ಬಗ್ಗೆ ಕಾಳಜಿಯು ಬೆಳೆದರೆ ಅದರಿಂದ ದೀರ್ಘಕಾಲಿಕ ಪ್ರಯೋಜನಗಳಿವೆ ಎಂದರು. ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ತಮ್ಮ ತಮ್ಮ ಪಾತ್ರಗಳನ್ನು ಸಮಯೋಚಿತವಾಗಿ ನಿರ್ವಹಿಸಬೇಕು ಎಂದರು.

ಐಕ್ಯೂಎಸಿ ಸಂಯೋಜಕ ಡಾ. ಸುರೇಶ್ ರೈ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ತನುಜಾ ಮಾಬೆನ್, ಸ್ವಚ್ಛ ಭಾರತ್ ಫ್ರೆಂಡ್ಸ್ ಹಾಗೂ ಜೇಸಿಐ ಉಡುಪಿ ಸಿಟಿ ಸದಸ್ಯರು, ಬೋಧಕ ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸ್ಥಾಪಕ ಗಣೇಶ್ ಪ್ರಸಾದ್ ಜಿ. ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಜೇಸಿಐ ಉಡುಪಿ ಸಿಟಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಉದಯ ನಾಯ್ಕ್ ವಂದಿಸಿದರು. ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಂಣಣಚಿಛಿhmeಟಿಣs ಚಿಡಿeಚಿ

By suddi9

Leave a Reply

Your email address will not be published. Required fields are marked *