ಬಂಟ್ವಾಳ: ಕಳೆದ ಆರು ಮೂರು ತಿಂಗಳಿನಿಂದ ಎರಡು ಶಸ್ತ್ರಚಿಕಿತ್ಸೆಗೆ ಒಳಪಟ್ಟ 95ಹರೆಯದ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾಯ ಆಚಾರ್ಯರು ಬಿ.ಸಿ.ರೋಡಿನಲ್ಲಿ ನಡೆದ ತಾಲೂಕುಮಟ್ಟದ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಕಳೆದ 2019 ಆಗಸ್ಟ್ ಆ.14 ರಂದು ಶಿವಮೊಗ್ಗದಿಂದ ಹೊರಟಿದ್ದ ಇವರು ಬಿ.ಸಿ.ರೋಡಿನಲ್ಲಿ ಆ.15 ರಂದು ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಇವರು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆಗುಂಬೆ ಬಳಿ ಬಸ್ಸಿನಿಂದ ಇಳಿದವರು, ಆಕಸ್ಮಿಕವಾಗಿ ಬಿದ್ದು ಸೊಂಟದ ಭಾಗದಲ್ಲಿ ಎಲುಬಿಗೆ ತೊಂದರೆ ಉಂಟಾಗಿ ಒಂದು ಶಸ್ತ್ರ ಚಿಕಿತ್ಸೆ ನಡೆದಿತ್ತು. ಕಳೆದ ಮೂರುವಾರದ ಹಿಂದೆ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿತ್ತು,
ಇದೇ ಸಂದರ್ಭ ಕಲ್ಲಡ್ಕ ದ ಮಗಳ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಅವರನ್ನು ಭೇಟಿಯಾದ ತಹಶೀಲ್ದಾರ್ ರಶ್ಮೀ ಯವರು ಯೋಗಕ್ಷೇಮ ವಿಚಾರಿಸಿ, ಶೀಘ್ರ ಗುಣಮುಖರಾಗಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಮಂತ್ರಿಸಿದ್ದರು. ಬಳಿಕ ಚಿಕ್ಕಮಗಳೂರಿನಲ್ಲಿರುವ ಮಗಳ ಮನೆಗೆ ವಿಶ್ರಾಂತಿಗೆ ತೆರಳಿದ್ದ ಶ್ಯಾಮರಾಯ ಆಚಾರ್ಯರು, ಗಣರಾಜ್ಯೋತ್ಸವ ದ ಕಾರ್ಯಕ್ರಮಕ್ಕೆಂದು ತಮ್ಮ ಮಗ ಸತೀಶ್ ಹಾಗೂ ಅಳಿಯ ಸುರೇಶ್ ಹಾಗೂ ಧನಂಜಯರ ಜೊತೆಯಲ್ಲಿ ಗಾಲಿಕುರ್ಚಿಯಲ್ಲಿ ಆಗಮಿಸಿದ್ದರು. ತುಕಡಿಗಳ ಪಥಸಂಚಲನ ಹಾಗೂ ಧ್ವಜಾರೋಹಣದ ಸಂದರ್ಭ ಇವರು ಕುಳಿತಲ್ಲಿಂದಲೇ ಸೆಲ್ಯೂಟ್ ಮಾಡಿ ಗಮನ ಸೆಳೆದರು. ತಾಲೂಕು ಆಡಳಿತದ ಪರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ರವರು ಶ್ಯಾಮರಾಯ ಆಚಾರ್ಯರನ್ನು ಸನ್ಮಾನಿಸಿದರು. ಕೆದ್ದಳಿಕೆ ಶಾಲೆಯ ಮಕ್ಕಳು ಈ ಹಿರಿಯಜ್ಜನಿಗೆ ಮುತ್ತಿಗೆ ಹಾಕಿ ಗೌರವ ಸಲ್ಲಿಸಿದರಲ್ಲದೆ, ಆಶೀರ್ವಾದ ಪಡೆದುಕೊಂಡರು.
