ಸ್ಪಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ, ರಾಜಪಥ್‌ನಲ್ಲಿ ಭಾಷಣ
ನವದೆಹಲಿ: ಸ್ವಚ್ಛ ಭಾರತ ನಮ್ಮ ಗುರಿಯಾಗಿದ್ದು, ಕಸ ಮಾಡುವುದಿಲ್ಲ ಮತ್ತು ಕಸ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶಪಥ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ಆಭಿಯಾನ ‘ಸ್ವಚ್ಛ ಭಾರತ’ಕ್ಕೆ ನವದೆಹಲಿಯಲ್ಲಿ ಇಂದು ಚಾಲನೆ ನೀಡಲಾಯಿತು. ರಾಜಪಥ್‌ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ ನಮ್ಮ ಗುರಿಯಾಗಿದ್ದು, ಸ್ವಚ್ಛ ಭಾರತ ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯ’ ಎಂದು ಹೇಳಿದರು.
‘ಸ್ವಚ್ಚ ಭಾರತ ಕಾರ್ಯ ಎಲ್ಲರಿಗೂ ಸೇರಿದ್ದು. ದೇಶದ ಪ್ರತಿಯೊಬ್ಬ ನಾಗರೀಕ ಕೂಡ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಅಭಿಯಾನಕ್ಕಾಗಿ ಎಲ್ಲ ರಾಜ್ಯಸರ್ಕಾರಗಳು ಸಹಕರಿಸಿದ್ದು, ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಮಕ್ಕಳು ಅಸ್ವಚ್ಛತೆಯಿಂದ ಸಾವನ್ನಪ್ಪುತ್ತಿದ್ದಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಧಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಅಶುದ್ಧ ನೀರು, ಅಸ್ವಚ್ಛತತೆ ಮತ್ತು ಕೊಳಕು ವಾತಾವರಣದಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ’.
‘ನಮ್ಮ ಸರ್ಕಾರದ ಮೇಲೆ ಭರವಸೆ ಇಲ್ಲದಿದ್ದರೂ ಸರಿ. ಮಹಾತ್ಮ ಗಾಂಧೀಜಿ ಅವರ ಮೇಲೆ ನಂಬಿಕೆ ಇಡಿ. ಗಾಂಧೀಜಿ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಿದರು. ಆ ಮೂಲಕ ನಮ್ಮನ್ನು ಸ್ವತಂತ್ರಗೊಳಿಸಿದರು. ಸ್ವಚ್ಛ ಮತ್ತು ಸ್ವಸ್ಥ ಭಾರತ ಗಾಂಧೀಜಿ ಅವರ ಕನಸಾಗಿತ್ತು. ದೇಶವನ್ನು ಸ್ವಚ್ಛಗೊಳಿಸುವ ಮೂಲಕ ನಾವು ಅವರ ಕನಸನ್ನು ನನಸಾಗಿಸುತ್ತೇವೆ. ಸ್ವಚ್ಛ ಭಾರತ ಕಾರ್ಯ ಎಲ್ಲರಿಗೂ ಸೇರಿದ್ದು. ಇದಕ್ಕೆ ರಾಜಕೀಯ ಬಣ್ಣ ಸೇರಿಸುವುದು ಬೇಡ. ರಾಷ್ಟ್ರಭಕ್ತಿಯಿಂದ ಎಲ್ಲರೂ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳೋಣ. ಅಭಿಯಾನಕ್ಕೆ ಎಲ್ಲ ರಾಜ್ಯಗಳೂ ಸಹಕರಿಸಿದ್ದು, ಅವರೆಲ್ಲರಿಗೂ ನನ್ನ ಅಭಿನಂದನೆಗಳು’.

‘ಸಾಮಾಜಿಕ ಜಾಲತಾಣಗಳಲ್ಲಿಯೂ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ನಾನು ಕೂಡ 9 ಜನರಿಗೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇನೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟರಾದ ಕಮಲ್ ಹಾಸನ್, ಸಲ್ಮಾನ್ ಖಾನ್, ಪ್ರಿಯಾಂಕಾ ಛೋಪ್ರಾ, ಗೋವಾ ರಾಜ್ಯಪಾಲರಾದ ಮೃದುಲಾ, ಯೋಗ ಗುರು ಬಾಬಾ ರಾಮದೇವ್, ತಾರಕ್ ಮೆಹ್ತಾ ಮತ್ತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಸೇರಿದಂತೆ ಒಟ್ಟು 9 ಜನರಿಗೆ ಆಹ್ವಾನ ನೀಡಿದ್ದೇನೆ’.
‘ದೇಶದ ಕೋಟ್ಯಂತರ ಜನರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೀವು ಕೂಡ ಅಭಿಯಾನದಲ್ಲಿ ಪಾಲ್ಗೊಂಡು ಅದ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೆಹಲಿಯ ರಾಜಪಥ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಸೇರಿದಂತೆ ಸುಮಾರು 1 ಲಕ್ಷದ 86 ಸಾವಿರ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಈ ವೇಳೆ ಮಕ್ಕಳಿಗೆ ಸ್ವಚ್ಛತಾ ಶಪಥ ಭೋದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಕ್ಕಳಿಂದ ‘ಕಸ ಮಾಡುವುದಿಲ್ಲ, ಕಸ ಮಾಡಲು ಬಿಡುವುದಿಲ್ಲ’ ಎಂಬ ಶಪಥ ಮಾಡಿಸಿದ್ದಾರೆ.
ಭಾಷಣದ ಬಳಿಕ ಸ್ವಚ್ಛತಾ ನಡಿಗೆಯಲ್ಲಿ ಪಾಲ್ಗೊಂಡ ಮೋದಿ ಅವರು, ರಾಜಪಥ್‌ನಲ್ಲಿ ಮಕ್ಕಳೊಂದಿಗೆ ಹೆಜ್ಜೆಹಾಕಿದರು. ಸುಮಾರು 4 ಕಿ.ಮೀ. ನಡೆಯುವ ಈ ಸ್ವಚ್ಛತಾ ನಡಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಇದಾದ ಬಳಿಕ ನಂತರ ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವಾರು ಗಣ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಸ ಗುಡಿಸಲಿದ್ದಾರೆ.



