ಬಂಟ್ವಾಳ : 19ನೇ ಶತಮಾನದವರೆಗೂ ಹಿಂದೂ ಸಮಾಜದಲ್ಲಿ ಮೂರು ವರ್ಣಗಳ ಪುರುಷರಿಗಷ್ಚೇ ಶಿಕ್ಷಣವು ಸೀಮಿತವಾಗಿತ್ತು. ಇದರಿಂದಾಗಿ ಸಮಾಜದ ಶೇಕಡಾ 90 ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಇದನ್ನು ಶೈಕ್ಷಣಿಕ ಹೋರಾಟದ ಮೂಲಕ ಶಿಕ್ಷಣದಿಂದ ವಂಚಿತರಾಗಿದ್ದ ಶೂದ್ರರಿಗೆ ಮತ್ತು ಎಲ್ಲಾ ವರ್ಣ-ಜಾತಿಗಳ ಮಹಿಳೆಯರಿಗೆ ಶಿಕ್ಷಣ ದೊರಕುವಂತೆ ಮಾಡಿದವರು ಪುಲೆ ದಂಪತಿಗಳು ಎಂದು ಅಂಬೇಡ್ಕರ್ ತತ್ವ ಪ್ರತಿಪಾದಕ ಧಮ್ಮಾನಂದ ಬಿ ಹೇಳಿದರು.

ಪಾಣೆಮಂಗಳೂರು ಶ್ರೀ ಶಾರದಾ ಫ್ರೌಡಶಾಲೆಯಲ್ಲಿ ಇತ್ತೀಚೆಗೆ ನಡೆದ ಅಕ್ಷರದವ್ವ, ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ 189 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲಾ ಹಿರಿಯ ಶಿಕ್ಷಕಿ ಉಮಾ ಕಿಶೋರಿ ಮಾತನಾಡಿ ಸ್ತ್ರೀ ಸಂವೇದನೆಯ ಬಗೆಗೆ ಚಿಂತಿಸುವುದರ ಜೊತೆಗೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಗಂಡಿಗೆ ಸಮಾನವಾದ ಪ್ರಾಶಸ್ತ್ಯ ಮತ್ತು ಸ್ಥಾನಮಾನ ಸಿಗುವ ರೀತಿಯಲ್ಲಿ ಬದುಕಿ ಸಾಧಿಸಬೇಕೆಂದರು. ಶಾಲಾ ಶಿಕ್ಷಕರಾದ ಶಿವಪ್ಪ ನಾಯಕ, ವೀಣಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಲತಾ ಪ್ರಾರ್ಥನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಭೋಜ ಕೆ. ಸ್ವಾಗತಿಸಿದರು. ಶಿಕ್ಷಕರಾದ ಧನರಾಜ್ ದೊಡ್ಡನೇರಳೆ ವಂದಿಸಿ, ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.
