ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದಲ್ಲಿರುವ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಸಂಭ್ರಮಕ್ಕೆ ಸಿದ್ದಗೊಂಡಿದೆ. ಜ.11 ಶನಿವಾರದಿಂದ ಮೊದಲ್ಗೊಂಡು ಜ.19 ಭಾನುವಾರದವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮೇಳೈಸಲಿದೆ. ಈಗಾಗಲೇ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳು ಶ್ರಮಿಸುತ್ತಿದ್ದು ರಾತ್ರಿ, ಹಗಲು ಶ್ರಮದಾನದ ಸೇವೆ ನಡೆಯುತ್ತಿದೆ.

IMG-20200110-WA0029
ಕ್ಷೇತ್ರದ ಹಿನ್ನಲೆ:
ಸುಮಾರು 1200 ವರ್ಷಗಳ ಹಿಂದೆ ವೀರಶೈವರು ನೇತ್ರಾವತಿ ನದಿಯಿಂದ ಸ್ವಯಂ ಭೂ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಿದ್ದು ಅದು ನಾವೂರೇಶ್ವರ ದೇವರಾಗಿ ಆರಾಧನೆಗೊಂಡಿತು. 600 ವರ್ಷದ ಹಿಂದೆ ಇದೇ ದೇವಸ್ಥಾನದಲ್ಲಿ ಸೋದೆ ಮಠದವರಿಂದ ವಿಷ್ಣುಮೂರ್ತಿ ದೇವರು ಪ್ರತಿಷ್ಠಾಪನೆಯಾಗಿ ನಾವೂರೇಶ್ವರ- ವಿಷ್ಣುಮೂರ್ತಿ ದೇವಸ್ಥಾನವಾಗಿ ಜನಜನಿತವಾಯಿತು. .
ಮಧ್ವಚಾರ್ಯರು ಧರ್ಮ ಪ್ರಸಾರಕ್ಕಾಗಿ ಉಡುಪಿಯಲ್ಲಿ ಬೆಳಗ್ಗಿನ ಪೂಜೆ ಸಲ್ಲಿಸಿ ನಡ್ವಂತ್ತಾಯ ಮಠ ಹಾಗೂ ಸುಬ್ರಹ್ಮಣ್ಯ ಮಠದಲ್ಲಿ ಪೂಜೆ ಸಲ್ಲಿಸಲು ಇದೇ ದಾರಿಯಾಗಿ ಹೋಗುತ್ತಿದ್ದರಂತೆ. ಹೀಗೆ ಸಾಗುವಾಗ ನಾವೂರು ಅಗ್ರಹಾರ, ನಾಟಿ ಅಗ್ರಹಾರ, ಹೊಸ ಅಗ್ರಹಾರ, ಕಲ್ಯಾಣಿ ಅಗ್ರಾಹರದಲ್ಲಿ ವಿಶ್ರಾಂತಿ ಪಡೆದು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರಂತೆ. ಅವರ ಶಿಷ್ಯರಾದ ವಾದಿರಾಜರು ಇಲ್ಲಿಗೆ ಬಂದಿದ್ದಾರೆ ಎನ್ನುವುದಕ್ಕೆ ಅವರು ಪ್ರತಿಷ್ಠಾಪಿಸಿದ್ದ ಮುಖ್ಯಪ್ರಾಣ ದೇವರ ಉಬ್ಬು ಶಿಲ್ಪ ಸಾಕ್ಷಿಯಾಗಿದೆ.

IMG-20200110-WA0034
ದಂಡ ತೀರ್ಥ ಮಹಿಮೆ:
ಈ ದೇವಾಲಯದ ನೈರುತ್ಯ ಭಾಗದಲ್ಲಿ ನೀರಕಟ್ಟೆ ಎನ್ನುವ ಪ್ರದೇಶವಿದೆ. ವಾದಿರಾಜರ ಶಿಷ್ಯ ವೇದವೈದ್ಯ ತೀರ್ಥರು ನಾವೂರು ಅಗ್ರಹಾರ ಮಠಕ್ಕೆ ಬಂದಾಗ ಸ್ನಾನ ಮಾಡಲು ನದಿಯಲ್ಲಿ ನೀರಿಲ್ಲದೇ ಇದ್ದುದರಿಂದ ನೇತ್ರಾವತಿ ನದಿಗೆ ತನ್ನ ದಂಡವನ್ನು ಇಟ್ಟು ನೀರು ನಿಲ್ಲಿಸಿ ಸ್ನಾನ ಮಾಡಿದ್ದರಂತೆ. ಈ ಕಾರಣಕ್ಕಾಗಿ ಈ ಸ್ಥಳ ದಂಡತೀರ್ಥ ಅಥವಾ ನೀರಕಟ್ಟೆಯೆಂದಾಯಿತು. ಇದರಿಂದಾಗಿ ಕೆಳ ಭಾಗದಲ್ಲಿರುವ ನಂದ ಅರಸನಿಗೆ ನದಿಯಲ್ಲಿ ನೀರು ಇಲ್ಲವಾಗಿ ವಿಷಯ ತಿಳಿದ ಆತ ಸ್ವಾಮೀಜಿಗಳಿಗೆ ನೀರು ಬಿಡುವಂತೆ ಕೇಳಿಕೊಂಡನಂತೆ. ಪ್ರತಿಯಾಗಿ ಸ್ವಾಮಿಗಳ ಸುಪರ್ದಿಗೆ 400 ಮುಡಿ ಗದ್ದೆಯನ್ನು ಸೋದೆ ಅಗ್ರಹಾರ ಮಠದ ಹೆಸರಿನಲ್ಲಿ ಬಿಟ್ಟುಕೊಟ್ಟನೆಂದು ಪ್ರತೀತಿ ಇದೆ.
ಹೊರೆ ಕಾಣಿಕೆ ಮೆರವಣಿಗೆ:
ಜ.11 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಬಿ.ಸಿ. ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿಯಿಂದ ಹಸಿರು ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ಮೆರವಣಿಗೆ ನಡೆಯಲಿದೆ. ಬಂಟ್ವಾಳ ಪೇಟೆ, ಜಕ್ರಿಬೆಟ್ಟು, ಮಣಿಹಳ್ಳ ಮಾರ್ಗವಾಗಿ ಹೊರೆಕಾಣಿಕೆ ಮೆರವಣಿಗೆ ದೇವಸ್ಥಾನ ತಲುಪಲಿದೆ. ಸಂಜೆ 6.30ಕ್ಕೆ ಉಗ್ರಾಣ ಮುಹೂರ್ತ ನೆರೆವೇರಲಿದೆ.
ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ:
ಉತ್ಸವದ ದಿನಗಳಲ್ಲಿ ಹೋಮ, ಕಲಶಾಭಿಷೇಕ, ಮಹಾಪೂಜೆ, ದುರ್ಗಾ ಪೂಜೆ, ಮಹಾ ಸುದರ್ಶನ ಹೋಮ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸ್ವಯಂ ಪ್ರಭಾ ಪರಿಣಯ, ಗೀತಾ ಸಾಹಿತ್ಯ ಸಂಭ್ರಮ, ನೃತ್ಯ ವೈವಿಧ್ಯ, ಹಾಸ್ಯ ಕಾರ್ಯಕ್ರಮ, ನಾಟಕ, ಯಕ್ಷಗಾನ, ಸಂಗೀತ ಗಾನ ವೈಭವ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಜ.18ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಜ.19ರಂದು ಬೆಳಿಗ್ಗೆ 5 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ 10 ರಿಂದ ವ್ಯಾಘ್ರ ಚಾಮುಂಡಿ ಹಾಗೂ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರುಗಲಿದೆ.

By suddi9

Leave a Reply

Your email address will not be published. Required fields are marked *