ಬಂಟ್ವಾಳ: ಮೂಡಬಿದ್ರಿ – ಬಂಟ್ವಾಳ ಲೋಕೋಪಯೋಗಿ ರಸ್ತೆಯ ಸೋರ್ನಾಡು ನಿಂದ ಬಂಟ್ವಾಳ ವರೆಗಿನ ರಸ್ತೆ ಅಗಲೀಕರಣ, ಮರುಡಾಮರೀಕರಣ ಕಾಮಗಾರಿಯು ಆರಂಭವಾಗಿ ಮೂರು ತಿಂಗಳು ಕಳೆದರೂ ಡಾಮರೀಕರಣ ಇನ್ನು ಕೂಡ ಆರಂಭವಾಗದ ಹಿನ್ನಲೆಯಲ್ಲಿ ಗರಂ ಆಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಂಬಂಧಿಸಿದ ರಾ. ಹೆ. ಇಲಾಖಾಧಿಕಾರಿಯವರನ್ನು ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡು ಒಂದು ತಿಂಗಳ ಒಳಗಾಗಿ ಮರುಡಾಮರಿಕರಣ ಕಾಮಗಾರಿಯನ್ನು ಪೂರ್ಣ ಗೊಳಿಸಲು ಗಡುವು ನೀಡಿದ್ದಾರೆ.
ಸೋರ್ನಾಡು ಬಂಟ್ವಾಳ ರಸ್ತೆ ಅಗಲೀಕರಣ , ಮರು ಡಾಮರೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಿ.ಆರ್ .ಎಫ್ .ಯೋಜನೆಯಾಡಿ 4 ಕೋಟಿ ರೂ. ಅನುದಾನ ಮಂಜೂರುಗೊಂಡು, ಕಾಮಗಾರಿಯ ಅನುಷ್ಠಾನವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೈಗೆತ್ತಿಕೊಂಡಿದೆ. ರಸ್ತೆ ಕಾಮಗಾರಿ ಆರಂಭವಾಗಿ ಮೂರು ತಿಂಗಳು ಕಳೆದರೂ ರಸ್ತೆಯ ಉದ್ದಗಲಕ್ಕೂ ಇಕ್ಕೆಲಗಳಲ್ಲಿನ ಅಗಲೀಕರಣ, ಚರಂಡಿ ಕಾಮಗಾರಿ ವಿಳಂಬವಾಗಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಬದಿಯಲ್ಲಿ ಕಲ್ಲುಗಳ ರಾಶಿ ಮತ್ತು ಧೂಳಿನಿಂದಾಗಿ ದ್ವಿಚಕ್ರ,ಇತರೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕರಿಂದ ದಿನಂಪ್ರತಿ ಶಾಸಕರ ಕಚೇರಿಗೆ ದೂರುಗಳ ಸರಮಾಲೆಯೇ ಬರುತ್ತಿದೆ.

ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಇಂಜಿನಿಯರ್ ಮುರುಗೇಶ್ ಅವರನ್ನು ಸಂಪರ್ಕಿಸಿ ಈ ತಿಂಗಳ ಅಂತ್ಯದೊಳಗೆ ಮರುಡಾಮರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಶಾಸಕರ ಖಡಕ್ ವಾರ್ನಿಂಗ್ ಗೆ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿಯ ಉನ್ನತ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರು ಬುಧವಾರ ಸಂಜೆಯೇ ಸ್ಥಳಕ್ಕೆ ದೌಡಾಯಿಸಿ, ಕಾಮಗಾರಿಯ ವಸ್ತುಸ್ಥಿತಿಯನ್ನು ಪರಿಶೀಲಿಸಿದರು.

