ಬಂಟ್ವಾಳ: ದೇಶದಲ್ಲಿ ತುಂಬಿರುವ ಅರಾಜಕತೆ, ಹತ್ಯೆ, ಅತ್ಯಾಚಾರ, ಹಣದುಬ್ಬರಗಳಂತ ಜ್ವಲಂತ ಸಮಸ್ಯೆಗಳಿಂದ ಜನರ ದಿಕ್ಕು ತಪ್ಪಿಸಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ಪೌರತ್ವ ನಿಷೇಧ ಕಾಯ್ದೆಯನ್ನು ತಂದಿದ್ದು, ಜಾತಿ ಧರ್ಮಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಟೀಕಿಸಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಫ್ಲೈಓವರ್ ಬಳಿ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಒಟ್ಟಾಗಿ ಬದುಕಬೇಕು ಎಂಬ ಚಿಂತನೆಯನ್ನು ರಾಷ್ಟ್ರ ಮಾಡುತ್ತಿದ್ದರೆ, ಅದನ್ನು ಒಡೆಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಒಡೆದು ಆಳುತ್ತಿರುವ ನೀತಿಯನ್ನು ಬ್ರಿಟಿಷರ ನೀತಿ ಮುಂದುವರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೊಡ್ಡ ಸಮುದಾಯವನ್ನು ಹೊರಗಿಡುವ ಮೂಲಕ ಒಡೆಯುವ ಕಾರ್ಯ ನಡೆಸುತ್ತಿದೆ. ಆರ್ಥಿಕ ಹಿಂಜರಿತ ಮುಚ್ಚಲು ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಪೌರತ್ವ ನಿಷೇಧ ಕಾಯ್ದೆಯಿಂದ ದೇಶದ ಸಾಮರಸ್ಯಕ್ಕೆ ಧಕ್ಕೆ ತರಲಾಗಿದೆ ಎಂದರು. ಜಾತ್ಯಾತೀತರನ್ನು ಅವಹೇಳನ ಮಾಡುವ ಕಾರ್ಯ ನೋವು ತರುತ್ತದೆ. ಮನುಷ್ಯ ಪ್ರೀತಿ ಮಾಡುವವರನ್ನು ಅಪಮಾನ ಮಾಡಲಾಗುತ್ತಿದೆ. ದೇಶದಲ್ಲಿ ಮತೀಯವಾದ ಮುಂದಿಟ್ಟು ಆಡಳಿತ ನಡೆಸುವುದು ಒಳ್ಳೆಯ ಲಕ್ಷಣವಲ್ಲ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಸಿದ್ದೀಕ್ ಗುಡ್ಡೆಯಂಗಡಿ, ಗಂಗಾಧರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪಕ್ಷ ಪ್ರಮುಖರಾದ ಸದಾಶಿವ ಬಂಗೇರ, ಯೂಸುಫ್ ಕರಂದಾಡಿ, ಮಹಮ್ಮದ್ ನಂದಾವರ, ಸಿದ್ಧೀಕ್ ಸರವು, ವೆಂಕಪ್ಪ ಪೂಜಾರಿ, ಪರಮೇಶ್ವರ ಎಂ, ಧನಲಕ್ಷ್ಮೀ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.


