ಮಂಗಳೂರು: ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್‌ ಕುಮಾರ್ (56) ಮಹಿಳೆಯರ ಹತ್ಯೆಯ 18ನೇ ಪ್ರಕರಣದಲ್ಲಿ ಕೊಲೆ ಅಪರಾಧಕ್ಕೆ ಮರಣದಂಡನೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.15546268-bd0c-4b5d-8136-fd5169e3b661

ಆರೋಪಿ ಮೋಹನ್ ಮೇಲೆ ಅಪಹರಣ ಪ್ರಕರಣಕ್ಕೆ 10 ವರ್ಷ ಜೈಲು, 5 ಸಾವಿರ ರೂ. ದಂಡ, ಅತ್ಯಾಚಾರ ಪ್ರಕರಣಕ್ಕೆ 7 ವರ್ಷ ಜೈಲು, 5 ಸಾವಿರ ರೂ. ದಂಡ, ವಿಷ ಉಣಿಸಿರುವುದಕ್ಕೆ 10 ವರ್ಷ ಜೈಲು, 5 ಸಾವಿರ ರೂ. ದಂಡ, ಚಿನ್ನಾಭರಣ ಸುಲಿಗೆ 5 ವರ್ಷ ಜೈಲು, 5 ಸಾವಿರ ರೂ. ದಂಡ, ವಿಷ ಉಣಿಸಿ ಸುಲಿಗೆ ಮಾಡಿರುವುದಕ್ಕೆ 10 ವರ್ಷ ಜೈಲು, 5 ಸಾವಿರ ರೂ.ದಂಡ, ವಂಚನೆ ಮಾಡಿರುವುದಕ್ಕೆ 1 ವರ್ಷ ಜೈಲು, ಸಾಕ್ಷ ನಾಶ ಮಾಡಿರುವುದಕ್ಕೆ 7 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಈ ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು. ಹೈಕೋರ್ಟ್ ಮರಣದಂಡನೆ ದೃಢೀಕರಿಸಿದರೆ ಈ ಎಲ್ಲ ಶಿಕ್ಷೆಗಳನ್ನು ಅಂತರ್ಗತ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಮೋಹನ್‌ಗೆ ಕಾಸರಗೋಡು ಬದಿಯಡ್ಕದ ಕಯ್ಯೆರ ಗ್ರಾಮದ ಪೈವಳಿಕೆ ನಿವಾಸಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿಯ ಪರಿಚಯವಾಗಿ, ತನ್ನನ್ನು ಆನಂದ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿದ್ದ.

2009ರ ಮೇ 21ರಂದು ಕುಶಾಲನಗರಕ್ಕೆ ತೆರಳಿ ಅಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದ. ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮರುದಿನ, ‘ದೇವಸ್ಥಾನಕ್ಕೆ ಹೋಗಲಿಕ್ಕಿದೆ. ಚಿನ್ನಾಭರಣ ರೂಮಲ್ಲೇ ಇರಲಿ’ ಎಂದು ತೆಗೆದಿಡಲು ಹೇಳಿ ಆಕೆಯನ್ನು ಸರಕಾರಿ ಬಸ್ ನಿಲ್ದಾಣಕ್ಕೆ ಕರೆದೊಯ್ದಿದ್ದ. ಬಳಿಕ ಗರ್ಭಪಾತ ಮಾತ್ರೆ ಎಂದು ಸಯನೈಡ್ ನೀಡಿ ಹತ್ಯೆ ಮಾಡಿದ್ದ. ಹಿಂದಿರುಗಿ ರೂಮ್‌ಗೆ ತೆರಳಿದ ಆತ ಚಿನ್ನಾಭರಣದೊಂದಿಗೆ ಪರಾರಿಯಾಗಿ, ಬಳಿಕ ಮಂಗಳೂರಿಗೆ ತಂದು ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಮನೆಯಲ್ಲಿ ಅಜ್ಜನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಳು. ಆದರೆ ಅಲ್ಲಿಯೂ ಹೋಗದೆ, ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಳು. ಮೂರು ದಿನಗಳ ಬಳಿಕ ಮನೆಯವರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಸಯನೈಡ್ ಮೋಹನ್ ಬಂಧನವಾದ ಬಳಿಕ ಈಕೆಯನ್ನು ಕೊಲೆ ಮಾಡಿರುವ ವಿಷಯ ಬಹಿರಂಗಗೊಂಡಿತ್ತು. ಅಂದಿನ ಸಿಒಡಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

47 ಸಾಕ್ಷಿ ವಿಚಾರಣೆ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ 47 ಸಾಕ್ಷಿ ವಿಚಾರಣೆ ನಡೆಸಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತ ವಾದಿಸಿದ್ದರು. ಶಿಕ್ಷೆಯ ಪ್ರಮಾಣದ ಸಂದರ್ಭ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದಿಸಿದ್ದರು. ಸಯನೈಡ್ ಮೋಹನ್ ಬೆಳಗಾವಿ ಹಿಂಡಲಗಾ ಜೈಲ್‌ನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದ್ದ.

18 ಪ್ರಕರಣಗಳಲ್ಲಿ 5ರಲ್ಮರಣದಂಡನೆ*

ಇದು ಸಯನೈಡ್ ಮೋಹನ್‌ನ 18ನೇ ಕೊಲೆ ಪ್ರಕರಣವಾಗಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ 5ನೇ ಪ್ರಕರಣ ಇದಾಗಿದೆ. ಈ ಹಿಂದಿನ 4 ಪ್ರಕರಣಗಳಲ್ಲಿ ಹೈಕೋರ್ಟ್ ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಕಠಿಣ ಶಿಕ್ಷೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮಾತ್ರ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಕಳೆದ ಅಕ್ಟೋಬರ್‌ನಲ್ಲಿ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆ ಹೈಕೋರ್ಟಿನ ದೃಢೀಕರಣಕ್ಕೆ ಬಾಕಿ ಇದೆ.

By suddi9

Leave a Reply

Your email address will not be published. Required fields are marked *