ಬಂಟ್ಚಾಳ:ತುಂಬೆಯಲ್ಲಿ ನಿರ್ಮಾಣಗೊಂಡ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ಇನ್ನು ಕೂಡ ಸೂಕ್ತ ಪರಿಹಾರ ನೀಡದಿರುವ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ತುಂಬೆ ವೆಂಟೆಡ್ ಡ್ಯಾಂ ವಿರುದ್ದದ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯಕ್ ಅವರನ್ನೊಳಗೊಂಡ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಸಿಂಧೂರಿ ಅವರನ್ನು ಭೇಟಿಯಾಗಿ ತುಂಬೆ ಡ್ಯಾಂ ನಲ್ಲಿ ನೀರು ನಿಲುಗಡೆಗೊಳಿಸಿದ ಬಳಿಕ ಮುಳುಗಡೆಯಾಗುವ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ದೊರಕದಿರುವ ಹಾಗೂ ನೆಲ ಬಾಡಿಗೆಯನ್ನು ನೀಡದಿರುವ ಬಗ್ಗೆ ಲಿಖಿತ ಮನವಿ ಸಲ್ಲಿಸಿ ಗಮನಸೆಳೆಯಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ತುಂಬೆ ಡ್ಯಾಂ ಸಂತ್ರಸ್ತ ರೈತರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದಶಂಬರ 10 ರ ಒಳಗಾಗಿ ಸಂತ್ರಸ್ತ ರೈತರ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆದು ಚರ್ಚಿಸುವ ಭರವಸೆ ನೀಡಿದ್ದಾರೆ ಎಂದು. ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಯೋಗದಲ್ಲಿ ಸಂತ್ರಸ್ಥ ರೈತರಾದ ಎಂ.ಕೆ.ಇದಿನಬ್ಬ, ಜಾನ್ ಲೋಬೋ, ಅಣ್ಣಪ್ಪಯ್ಯ ,ಪ್ರಕಾಶ್ ,ಅಬ್ದುಲ್ ರಹಿಮಾನ್, ಶಶಿಧರ, ಧನಂಜಯ ಶೆಟ್ಟಿ, ಮೊದಲಾದವರಿದ್ದರು.
