ಬಂಟ್ವಾಳ: ಶಾಲೆಯಲ್ಲಿ ಎಲ್ಲಾ ಮಕ್ಕಳು ಸಮಾನರು ಎನ್ನುವ ಸರಕಾರಗಳು ವಿದ್ಯಾರ್ಥಿ ವೇತನ ನೀಡುವಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಂದು ತಾರತಮ್ಯ ಮಾಡುವುದಾದರೂ ಯಾಕೆ ಇಂತಹ ಪ್ರಶ್ನೆಯನ್ನು ವಿದ್ಯಾರ್ಥಿಗಳು ಮಕ್ಕಳ ಗ್ರಾಮಸಭೆಯಲ್ಲಿ ಪ್ರಶ್ನಿಸಿ ಅಚ್ಚರಿ ಮೂಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತ್ ವತಿಯಿಂದ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕ ಹರ್ಷಲ್ ರೊಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿವಿಧ ಶಾಲೆಯ ಮಕ್ಕಳು ಹಲವು ಪ್ರಶ್ನೆಗಳ ಸುರಿಮಳೆ ಹರಿಸಿದರು.
ಗುಣಶ್ರೀ ವಿದ್ಯಾಲಯ ಮಾತ್ರವಲ್ಲದೆ ಸ್ಥಳೀಯ ಹೆಣ್ಣೂರುಪದವು, ಎಲಿಯನಡುಗೋಡು ಸರಕಾರಿ ಪ್ರಾಥಮಿಕ ಶಾಲೆ, ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರತೀ ಶಾಲೆಯಲ್ಲಿ ಪ್ರತ್ಯೇಕ ಕಸದ ತೊಟ್ಟಿ ಬೇಕು. ಸಿದ್ಧಕಟ್ಟೆಯಿಂದ ರಾಯಿ, ಕೊಯಿಲ, ವಾಮದಪದವು ಮತ್ತಿತರ ಕಡೆಗೆ ತೆರಳಲು ಸರಕಾರಿ ಬಸ್ ಬೇಕು. ಶಾಲೆಯ ಎದುರಿನ ರಸ್ತೆಗೆ ಹಂಪ್ಸ್ ಮತ್ತು ಝೀಬ್ರಾ ಅಳವಡಿಸಬೇಕು ಎಂಬ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ತಾಲೂಕು ಪಂಚಾಯಿತ್ ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಸದಸ್ಯರಾದ ಸುಧಾಕರ ಶೆಟ್ಟಿ, ಲಿಂಗಪ್ಪ ಪೂಜಾರಿ, ಬೇಬಿ, ಶೋಭಾ, ಸುಜಾತ, ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ನೀತಾ, ಗುಣಶ್ರೀ ವಿದ್ಯಾಲಯ ಸಂಚಾಲಕ ವಿಜಯ ಕುಮಾರ್ ಚೌಟ, ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೋ, ಅಂಗನವಾಡಿ ಕಾರ್ಯಕರ್ತೆಯರಾದ ಸರಿತಾ, ಆಶಾ ಕಾರ್ಯಕರ್ತೆಯರಾದ ಭಾರತಿ, ಪುಷ್ಪಲತಾ ಮತ್ತಿತರರು ಇದ್ದರು. ಪಿಡಿಒ ಗಣೇಶ್ ಶೆಟ್ಟಿಗಾರ್ ಸ್ವಾಗತಿಸಿ, ವಂದಿಸಿದರು
