ಕೈಕಂಬ : ಕಂದಾವರ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಗುರುವಾರ 2019-20ನೇ ಸಾಲಿನ `ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು. ನ.21ರಂದು ಗುರುವಾರ ನಡೆಯಿತು.ಸಭೆಯಲ್ಲಿ ಆದ್ಯಪಾಡಿ, ಕಿನ್ನಿಕಂಬಳ ಹಾಗೂ ಸುಂಕದಕಟ್ಟೆ ಪ್ರಾಥಮಿಕ ಹಾಗೂ ಪ್ರೌಢಾ ಶಾಲಾ ಮಕ್ಕಳು ಪಾಲ್ಗೊಂಡಿದ್ದು, ಶಾಲೆ ಹಾಗೂ ಶಾಲಾ ಪರಿಸರಕ್ಕೆ ಸಂಬಂಧಿಸಿದ ಹಲವು ಮಹತ್ವದ ಪ್ರಶ್ನೆಗಳು ಕೇಳಿ ಬಂದವು.gur-nov-21-kandavara

ಆದ್ಯಪಾಡಿ ಶಾಲಾ ಮಕ್ಕಳು...

ನಮ್ಮ ಶಾಲೆಯ ಆಟದ ಮೈದಾನಕ್ಕೆ ವಿದ್ಯುತ್ ದೀಪ, ಆವರಣ ಗೋಡೆ, ಕಸದ ತೊಟ್ಟಿ, ಸೀಸಿಟೀವಿ ಕ್ಯಾಮರಾ, ಶಾಲೆಗೆ ಹತ್ತಿರದ ರಸ್ತೆಗೆ ದುರಸ್ತಿ ಮಾಡಬೇಕು. ಬಸ್ಸಿಲ್ಲದೆ ಗ್ರಾಮ ಕುಗ್ರಾಮವಾಗಿದೆ. ಹಾಗಾಗಿ ಶಾಲಾ ಮಕ್ಕಳ ಅನುಕೂಲಕ್ಕೋಸ್ಕರ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು.

ಸುಂಕದಕಟ್ಟೆ ಶಾಲಾ ಮಕ್ಕಳು…

ಇಲ್ಲಿ ಆಟದ ಮೈದಾನವಿದ್ದರೂ ದೈಹಿಕ ಶಿಕ್ಷಕರಿಲ್ಲ. ಹಾಸ್ಟೆಲ್ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ವಾರ್ಡನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇಲ್ಲಿನ ಸದ್ಯದ ಒಟ್ಟು ಅಗತ್ಯಗಳಿಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಲಾ ಮಕ್ಕಳು ಒತ್ತಾಯಿಸಿದರು.

ಕಿನ್ನಿಕಂಬಳ ಶಾಲಾ ಮಕ್ಕಳು…

ಶಾಲೆಗೆ ಈಗ ದೈಹಿಕ ಶಿಕ್ಷಕರು ಬಂದಿದ್ದಾರೆ. ಆದರೆ ಇಲ್ಲಿ ಆಡಲು ಮೈದಾನವೇ ಇಲ್ಲ. ಶಾಲೆಯ ಎದುರು ಸಾವಿರಾರು ವಾಹನಗಳು ಓಡಾಡುತ್ತಿದ್ದು, ಶಾಲಾ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ. ಅಪಘಾತ ವಲಯವಾಗಿರುವ ಇಲ್ಲೊಂದು ರಸ್ತೆ ಹಂಪ್ಸ್, ದಾರಿದೀಪ ಅಳವಡಿಸಬೇಕು. ಶಾಲಾ ಹೊರಗಡೆ ಹುಲುಸಾಗಿ ಬೆಳೆದಿರುವ ಹುಲ್ಲು ತೆರವುಗೊಳಿಸಬೇಕು ಮತ್ತು ಶಾಲೆಗೆ ಅಗತ್ಯವಿರುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಲವು ವಿದ್ಯಾರ್ಥಿಗಳು ಬೇಡಿಕೆ ಇಟ್ಟರು.

ಕಿನ್ನಿಕಂಬಳ ದಕ ಜಿಪಂ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಈಗ ನಿಯುಕ್ತರಾಗಿರುವ ಶಿಕ್ಷಕರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಮಕ್ಕಳ ಸಂಖ್ಯೆ ಹೆಚ್ಚಿದ್ದು, ಇಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಪ್ರಯತ್ನಿಸುವಂತೆ ಮಕ್ಕಳ ಪರವಾಗಿ ಶಿಕ್ಷಕಿ ತಾರಾ ಒತ್ತಾಯಿಸಿದರು.

ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮ ವ್ಯಾಪ್ತಿಯ ಶಾಲೆಗಳ ಹಳೆಯ ಸಮಸ್ಯೆಗಳಿಗೆ ಈಗಾಗಲೇ ಪರಿಹಾರ ಕಂಡುಕೊಳ್ಳಲಾಗಿದೆ. ಉಳಿದಂತೆ ಶಾಲಾ ಮಕ್ಕಳು ಸಭೆಯಲ್ಲಿ ಮುಂದಿಟ್ಟ ಬೇಡಿಕೆಗಳಿಗೆ ಅನುಗುಣವಾಗಿ ಕೈಗೊಂಡ ನಿರ್ಣಯಗಳ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ದೇವೇಂದ್ರ ಹಾಗೂ ಸದಸ್ಯರು ಇದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಶಾಲಾ ಮಕ್ಕಳ ಜೊತೆಯಲ್ಲಿ ಶಿಕ್ಷಕರು ಇದ್ದರು.

By suddi9

Leave a Reply

Your email address will not be published. Required fields are marked *