ಸುರತ್ಕಲ್: ಹಿಂದಿನ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಭ್ರಷ್ಟಾಚಾರದ ಕೂಪ ಆಗಿತ್ತು. ಹಿಂದಿನ ಆಡಳಿತದ ಅವಧಿಯಲ್ಲಿ ಜನರಿಗೆ ಸಮಸ್ಯೆಯ ಸರಮಾಲೆಯನ್ನು ಸೃಷ್ಟಿಸಿದರೆ ಹೊರತು ಯಾವುದನ್ನೂ ಪರಿಹರಿಸಿಲ್ಲ. ತುಳಸಿ ಕಟ್ಟೆಗೂ ಟ್ಯಾಕ್ಸ್ ಹಾಕುವ ಮೂಲಕ ಜನರ ವಿರೋಧ ಕಟ್ಟಿಕೊಂಡರು. ಕೇಂದ್ರ ಸರಕಾರ ಕೊಟ್ಟಿರುವ ಸ್ಮಾರ್ಟ್ ಸಿಟಿ ಸಹಿತ ಯೋಜನೆಗಳನ್ನು ಸರಿಯಾಗಿ ಜಾರಿಮಾಡುವಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತ ವಿಫಲವಾಗಿದೆ ಎಂದರು.
ವಾರ್ಡ್ ನಲ್ಲಿ ಯಾವ ಯೋಜನೆ ಮೂಲಕ ಎಷ್ಟು ಹಣ ಕೊಳ್ಳೆ ಹೊಡೆಯಬಹುದು ಎಂಬ ಯೋಚನೆಯಲ್ಲಿ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ. ಹಿಂದಿನ ಅವಧಿಯಲ್ಲಿ ಮಂಗಳೂರು ಮಹಾನಗರ ಹಠಾತ್ ಮಳೆಗೆ ಮುಳುಗಿತು. ಇದಕ್ಕೆ ಕಾಂಗ್ರೆಸ್ ನೇತೃತ್ವದ ಪಾಲಿಕೆ ಆಡಳಿತ ಕಾರಣ. ಇದರಿಂದ ನಗರವಾಸಿಗಳು ರೋಸಿಹೋಗಿದ್ದಾರೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳಾದ ವಾಮಂಜೂರು ತ್ಯಾಜ್ಯ ಡಂಪಿಂಗ್ ಯಾರ್ಡ್ ಸಮಸ್ಯೆ, ಶಾಶ್ವತ ನೀರಾವರಿ ಯೋಜನೆ ಇತ್ಯಾದಿ ತರುವಲ್ಲಿ ಬಿಜೆಪಿ ಮುಂದಿನ ಆಡಳಿತ ಶ್ರಮಿಸಲಿದೆ.
ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ ಸಿದ್ದರಾಮಯ್ಯ ಅವರು ಒಮ್ಮೆ ಜಿಲ್ಲೆಗೆ ಬಂದೇ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು. ಕಾಂಗ್ರೆಸ್ಗೆ ಶನಿ ಯಾರೆಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರೇ ಹೇಳುತ್ತಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ನಡೆದಿರುವ ವಿವಾದ, ಹೊಡೆದಾಟದಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ. ಹೀಗಾಗಿ ಪಾಲಿಕೆಯ 60 ವಾರ್ಡ್ ಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಲಿದೆ ಎಂದು ಕಟೀಲ್ ಹೇಳಿದ್ದಾರೆ.

