ಗುರುಪುರ : ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿರುವ ಬ್ರಿಟಿಷರ ಕಾಲದ ಹಳೆ ಸೇತುವೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ(169) ಇತರೆಡೆ ಗುರುವಾರ ಡಾಮರು ಹಾಸುವ ಕಾಮಗಾರಿ ನಡೆಯಿತು.
ಬೆಳಿಗ್ಗೆ 6:15ಕ್ಕೆ ಆರಂಭಗೊಂಡ ಕಾಮಗಾರಿ ಸಂಜೆಯವರೆಗೆ ಮುಂದುವರಿಯಿತು. ಸೇತುವೆ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಹೊಂಡಾಗುಂಡಿಗಳ ಕಲ್ಲುಮಣ್ಣು ತೆರವುಗೊಳಿಸಿ, ಧೂಳು ಹಾರಿಸಿ, ಜಲ್ಲಿ ಹಾಕಿ ಡಾಮರು ಅಳವಡಿಸಲಾಯಿತು.
ಸಂಚಾರ ನಿಷೇಧ :
ಅಗಲ ಕಿರಿದಾದ ಈ ಸೇತುವೆ ರಸ್ತೆ ದುರಸ್ತಿ ಹಾಗೂ ಡಾಮರೀಕರಣ ನಡೆಯುತ್ತಿದ್ದಾಗ, ಡೀಸಿ ಆದೇಶದ ಮೇರೆಗೆ ಈ ಮಾರ್ಗದಲ್ಲಿ ನಿರ್ದಿಷ್ಟ ಹಂತದವರೆಗೆ ದ್ವಿಚಕ್ರ ವಾಹನ ಸಹಿತ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅತ್ತ ಕೈಕಂಬದವರೆಗೆ ಹಾಗೂ ಮತ್ತೊಂದೆಡೆ ವಾಮಂಜೂರು-ಪರಾರಿವರೆಗೆ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು, ಅಲ್ಲಿಂದ ಮಂಗಳೂರು ತಲುಪಲು ಬಜ್ಪೆ, ಮರವೂರು, ಪೊಳಲಿ, ಬಿ ಸಿ ರೋಡ್ ಮೂಲಕ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ಗುರುಪುರ ಸೇತುವೆ ರಸ್ತೆಯಲ್ಲದೆ ಕುಕ್ಕುದಕಟ್ಟೆ, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನಕ್ಕೆ ಹತ್ತಿರದ ಮೋರಿ, ವಾಮಂಜೂರು ಸೈಂಟ್ ಜೋಸೆಫ್ ಇಂಜಿಯರಿಂಗ್ ಕಾಲೇಜಿನ ಎದುರು ಏಕಕಾಲದಲ್ಲಿ ಡಾಮರೀಕರಣ ನಡೆಯಿತು. ಬಿಕರ್ಣಕಟ್ಟೆ, ಶಕ್ತಿನರ ಜಂಕ್ಷನ್, ಕುಲಶೇಖರದಲ್ಲೂ ಪ್ಯಾಚ್‍ವರ್ಕ್ ನಡೆಯುತ್ತಿದೆ. ಸೇತುವೆ ರಸ್ತೆ ಡಾಮರೀಕರಣಕ್ಕೆ ಕಾವೂರಿನ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ 32 ಕೂಲಿ ಕಾರ್ಮಿಕರು, ನಾಲ್ವರು ಸೂಪರ್‍ವೈಸರ್, ಮೂವರು ಇಂಜಿನಿಯರುಗಳು ಹಾಗೂ ಹಲವು ವಾಹನಗಳನ್ನು ಗೊತ್ತುಪಡಿಸಲಾಗಿತ್ತು. ಕಂಪೆನಿ ಮಾಲಕ ಸುಧಾಕರ ಶೆಟ್ಟಿ, ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ, ದಾವೋದರ, ನಿಖಿಲ್, ದೀಕ್ಷಿತ್ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ(ಮಂಗಳೂರು) ಸಹಾಯಕ ಇಂಜಿನಿಯರ್ ಮುರುಗೇಶ್ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಂಡರು.
ಕಾಮಗಾರಿ ಆರಂಭಿಸಿದ ವೇಳೆ ಕೈಕಂಬ-ಪೊಳಲಿ ದ್ವಾರದ ಬಳಿ ಹಾಗೂ ವಾಮಂಜೂರಿನಲ್ಲಿ `ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫಲಕ ಅಳವಡಿಸದ್ದರಿಂದ ಬೆಳಿಗ್ಗಿನ ಹೊತ್ತು ಕಾಮಗಾರಿ ಸ್ಥಳದವರೆಗೆ ಬಂದಿದ್ದ ಕೆಲವು ವಾಹನಿಗರು ಗುತ್ತಿಗೆ ಕಂಪೆನಿ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿ, ಭಾನುವಾರ ಡಾಮರೀಕರಣ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ಬಳಿಕ ಎರಡೂ ಕಡೆಯಲ್ಲಿ ಫಲಕ ಅಳವಡಿಸಲಾಯಿತು. ಆದರೆ ಬಹುತೇಕ ಎಲ್ಲ ಸಾರ್ವಜನಿಕರು ಇಂದಿನ ಕಾಮಗಾರಿಗೆ ಸಹಕರಿಸಿದರು. ಕಾಮಗಾರಿ ಸ್ಥಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಬೆಳಿಗ್ಗೆ ಕೆಲವು ವಾಹನಗಳು ಕಾಮಗಾರಿ ಸ್ಥಳಕ್ಕೆ ಬಂದು ವಾಪಾಸಾದವು. ಉಳಿದಂತೆ, ಮಧ್ಯಾಹ್ನದ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಯ(169) ವಾಮಂಜೂರು-ಗುರುಪುರ ಕೈಕಂಬದವರೆಗೆ ಬಿಕೋ ಎನ್ನುತ್ತಿತ್ತು. ದಿನಗೂಲಿ ಕಾರ್ಮಿಕರು ಬೆಳಿಗ್ಗೆ ನಡೆದುಕೊಂಡು ಸಾಗಿದರು. ಎರಡೂ ಕಡೆಯಲ್ಲಿ ಒಂದೆರಡು ಶಾಲೆಗೆ ರಜೆ ನೀಡಲಾಗಿದ್ದರೆ, ಈ ಭಾಗದ ಹೆಚ್ಚಿನ ಮಕ್ಕಳು ರಜೆ ಮಾಡಿದ್ದರು.




