‌ಬಂಟ್ವಾಳ: ಒಂದು ಪಪ್ಪಾಯಿ ಬೆಲೆ 10,000 ರೂ. ಎಂದರೆ ನೀವು ನಂಬುತ್ತೀರಾ? ಈ ಘಟನೆ ನಡೆದದ್ದು, ಬಂಟ್ವಾಳ ತಾಲೂಕಿನ ಬೊರಿಮಾರ್ ಎಂಬಲ್ಲಿ! ಇಲ್ಲಿನ ‌ಚರ್ಚಿನ ಕಾರ್ಯಕ್ರಮ ಒಂದರಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯೊಬ್ಬರು 10,100 ರೂ.‌ ಕೊಟ್ಟು ಪಪ್ಪಾಯಿ ಹಣ್ಣನ್ನು ಖರೀದಿಸಿದ್ದಾರೆ.‌
IMG-20191028-WA0030
ಬೊರಿಮಾರ್ ಚರ್ಚ್ ನಲ್ಲಿ ಶತಮಾನೋತ್ತರ ಬೆಳ್ಳಿಹಬ್ಬ‌ ಆಚರಿಸಲಾಗಿತ್ತು.‌ 2019 ಅಕ್ಟೋಬರ್ ತಿಂಗಳನ್ನು ಮಿಷನ್ ಸಂಡೆಗಳಾಗಿ ಆಚರಿಸುವಂತೆ ಪೋಪ್ ಫ್ರಾನ್ಸಿಸ್ ರವರ ಆದೇಶದ ಮೇರೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಮಾರ್ಗದರ್ಶನದಲ್ಲಿ ಬೊರಿಮಾರ್ ಚರ್ಚ್ ನಲ್ಲಿ ನಿನ್ನೆ ಭಾನುವಾರ ಮಿಷನ್ ಸಂಡೆಯನ್ನು ಆಚರಿಸಲಾಯಿತು.
ಈ ಪ್ರಯುಕ್ತ ಬೊರಿಮಾರ್ ಧರ್ಮಕೇಂದ್ರಕ್ಕೆ ಸೇರಿದ ಸಮಸ್ತ ಕ್ರೈಸ್ತ ಭಕ್ತಾದಿಗಳು ಬಲಿಪೂಜೆಗೆ ತಮ್ಮ ತೋಟದಲ್ಲಿ ಬೆಳೆದ ತರಕಾರಿ ಹಣ್ಣು-ಹಂಪಲುಗಳ ಜೊತೆಯಲ್ಲಿ ಕೋಳಿ, ಹೆರೆಮಣೆ ಸಹಿತ ಹಲವು ವಸ್ತುಗಳನ್ನು ಹೊತ್ತುತಂದು ಕಾಣಿಕೆಯಾಗಿ ಚರ್ಚಿಗೆ ಸಮರ್ಪಿಸಿ, ದೇವರ ಆರ್ಶಿವಾದ ಪಡೆಯುತ್ತಿದ್ದರು.‌
IMG-20191028-WA0030
ಪೂಜೆಯ ಬಳಿಕ ಎಲ್ಲಾ ಕ್ರೈಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಹರಾಜು ಮಾಡಲಾಯಿತು. ಈ ವೇಳೆ ಪಪ್ಪಾಯಿಯೊಂದನ್ನು 85 ವರ್ಷ ಪ್ರಾಯದ ಬೊನವೆಂಚರ್ ಪುತ್ತಾಮ್ ಪಿಂಟೊ ಎನ್ನುವವರು 10,100 ರೂ. ಕೊಟ್ಟು ಖರೀದಿಸುವ ಮೂಲಕ ಗಮನಸೆಳೆದರು. ಬೊರಿಮಾರ್ ಚರ್ಚ್ ನಲ್ಲಿ ಧರ್ಮಗುರುಗಳಾಗಿರುವ ವಂ. ಗ್ರೆಗರಿ ಪಿರೇರಾ ರವರು ಈಗಾಗಲೇ ಚರ್ಚ್ ನಲ್ಲಿ ಪಪ್ಪಾಯಿ ಕೃಷಿ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದು, ಅವರ ಮೇಲಿನ ಪ್ರೀತಿ ಹಾಗೂ ಮಿಷನ್ ಸಂಡೇ ಕಾರ್ಯಕ್ರಮದ ಅಭಿಮಾನದಿಂದ ಪಪ್ಪಾಯಿಯನ್ನು ಸಾವಿರಾರು ರೂಪಾಯಿ ಬೆಲೆ ನೀಡಿ ಖರೀದಿಸಿರುವುದಾಗಿ ಬೊನವೆಂಚರ್ ಪಿಂಟೋ ಹೇಳಿಕೊಂಡಿದ್ದಾರೆ.
  ಒಂದು ಹೆರೆಮಣೆ 6,600ರೂ, ಒಂದು ಕೋಳಿ 3,500 ರೂ.,9 ಸೀಯಾಳ 4,200, 1 ಬಾಳೆ ಗೊನೆ 1,250 ಹಾಗೂ ಬಾಳೆ ಎಲೆ 1,200 ರೂ ಗೆ ಸೇರಿದಂತೆ ಹಲವಾರು ವಸ್ತುಗಳ ಹರಾಜು ನಡೆಸಲಾಯಿತು. ಒಟ್ಟು 1,24,000 ರೂ ಮೊತ್ತ ಸಂಗ್ರಹವಾಯಿತು. ಚರ್ಚ್ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ಮತ್ತು ಅಲೆಕ್ಸ್ ಮೊರಾಸ್ ರವರು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಏನಿದು ಮಿಷನ್ ಸಂಡೇ..?
ಧರ್ಮಕೇಂದ್ರ ವ್ಯಾಪ್ತಿಯ ಬಡಕುಟುಂಬಗಳಿಗೆ ನೆರವಾಗಬೇಕೆನ್ನುವ ಆಶಯದೊಂದಿಗೆ  ಮಿಷನ್ ಸಂಡೇ  ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರಿಂದ ವಸ್ತುಗಳನ್ನು ಕಾಣಿಕೆಯಾಗಿ‌ ಸ್ವೀಕರಿಸಿ ಬಡವರಿಗೆ ಹಂಚುವ ಮೂಲಕ ಈ ಕಾರ್ಯಕ್ರಮದ ಪ್ರಮುಖ ಅಂಶ.  ಬೊರಿಮಾರ್ ಚರ್ಚ್ ಧರ್ಮಗುರುಗಳಾದ ವಂ. ಫಾದರ್ ಗ್ರೆಗರಿ ಪಿರೇರಾ ಅವರ ಕೋರಿಕೆಯ ಮೇರೆಗೆ ಪ್ರತೀ ಕುಟುಂಬದವರು ವಿವಿಧ ತರಕಾರಿಗಳನ್ನು, ವಸ್ತುಗಳನ್ನು ಕಾಣಿಕೆಯಾಗಿ ನೀಡಿ, ಹರಾಜಿನಲ್ಲಿ ಪಡೆದು ಮಿಷನ್ ಸಂಡೆಯ ಉದ್ದೇಶವನ್ನು ಅರ್ಥಪೂರ್ಣಗೊಳಿಸಿದ್ದಾರೆ. ಸಂಗ್ರಹವಾದ ಮೊತ್ತವನ್ನು ಬಡವರ ಸೇವಾ ಕಾರ್ಯ ಕೈಗೊಳ್ಳಲು ಚರ್ಚ್ ಪಾಲನಾ ಸಮಿತಿ ವಿನಿಯೋಗ ಮಾಡುತ್ತದೆ.

By suddi9

Leave a Reply

Your email address will not be published. Required fields are marked *