ಕೈಕಂಬ: ನಿರ್ಮಾಣ ಹಂತದಲ್ಲಿರುವ ಗುರುಪುರ ಹೊಸ ಸೇತುವೆಯ ಎದುರು(ಮೂಡಬಿದ್ರೆ ಕಡೆಗೆ) ಚತುಷ್ಪಥ ರಸ್ತೆಗಾಗಿ ವಿಸ್ತರಣೆಗೊಳಿಸಲಾದ ಜಾಗದಲ್ಲಿರುವ ಬೃಹತ್ ಗೋಳಿ ಮರವೊಂದನ್ನು ಅ.24ರಂದು ಗುರುವಾರ ಕಡಿದು ಹಾಕಲಾಯಿತು. ಈ ಸಂದರ್ಭದಲ್ಲಿ ಮಂಗಳೂರು-ಮೂಡಬಿದ್ರೆ ಹೆದ್ದಾರಿಯಲ್ಲಿ ಅರ್ಧ ತಾಸು ಸಂಚಾರ ಸ್ಥಗಿತಗೊಂಡಿದ್ದು, ಸೇತುವೆಯ ಎರಡೂ ಪಾಶ್ರ್ವಗಳಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿದ್ದವು.
ಕಡಿಯಲಾದ ಮರದ ಭಾರೀ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಗುತ್ತಿಗೆದಾರ ರಫೀಕ್ ಹಾಗೂ ಅವರ ಸಿಬ್ಬಂದಿಯು ಕಟ್ಟಿಂಗ್ ಯಂತ್ರಗಳು ಹಾಗೂ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ ಜೆಸಿಬಿ ಬಳಸಿ ಅರ್ಧ ತಾಸಿನಲ್ಲಿ ಮರ ತೆರವುಗೊಳಿಸಿ, ರಸ್ತೆ ಸಂಚಾರ ಸುಗಮಗೊಳಿಸಿದರು.
ಇದೇ ವೇಳೆ, ಮೆಸ್ಕಾಂ ಸಿಬ್ಬಂದಿಯಿಂದ ಇಲ್ಲೇ ರಸ್ತೆಯ ಪಕ್ಕದಲ್ಲಿದ್ದ ನಾಲ್ಕೈದು ವಿದ್ಯುತ್ ಕಂಬ ಹಾಗೂ ಒಂದು ಟ್ರಾನ್ಸ್‍ಫಾರ್ಮರ್ ತೆರವು ಕಾರ್ಯ ನಡೆಯಿತು. ರಸ್ತೆಯ ಮತ್ತೊಂದು ಪಕ್ಕದಲ್ಲಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಯಿತು. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಸ್ಥಳೀಯವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು
