ಬಂಟ್ವಾಳ : ತಾಲೂಕಿನ ಸಜಿಪನಡು ಗ್ರಾಮವನ್ನು ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿನಿಂದ ಕೈ ಬಿಡುವಂತೆ ಹಾಗೂ ಸಜಿಪನಡು ಗ್ರಾಮವನ್ನು ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸುವಂತೆ ಆಗ್ರಹಿಸಿ ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ ನೇತೃತ್ವದ ನಿಯೋಗವು ದ.ಕ. ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಿತು.
ದ.ಕ.ಜಿಲ್ಲಾ ಉಸ್ತುವಾರಿ ಅವರನ್ನು ಮಂಗಳೂರು ಕಚೇರಿಯಲ್ಲಿ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು. ಈಗಾಗಲೇ ಈಬಗ್ಗೆ ಗ್ರಾಮ ಪಂಚಾಯತ್ ಸಾಮಾನ್ಯಸಭೆ ಹಾಗೂ ಗ್ರಾಮಸ್ಥರ ವಿಶೇಷ ಸಭೆಯಲ್ಲಿ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಹಾಗೆಯೇ ಉಳ್ಳಾಲ ತಾಲೂಕು ಸೇರ್ಪಡೆ ವಿರೋಧಿಸಿ ಕಂದಾಯ ಸಚಿವ ಆರ್. ಅಶೋಕ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಯು.ಟಿ.ಖಾದರ್, ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಸಜಿಪನಡು ಗ್ರಾಪಂ ಅಧ್ಯಕ್ಷ ನಾಸಿರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಮೊಕ್ತೇಸರ ಮುಳ್ಳಿಂಜ ವೆಂಕಟೇಶ್ವರ ಭಟ್, ಜೆರಿ ಮೊರಸ್, ಗ್ರಾಪಂ ಸದಸ್ಯರಾದ ಅಬ್ದುಲ್ ರಹಿಮಾನ್, ಸುರೇಶ್ ಬಂಗೇರ ಹಾಜರಿದ್ದರು.

