ಬಂಟ್ವಾಳ: ತಾಲೂಕಿನ ಇರಾ ಗ್ರಾಮದ ಪಂಜಿಕಲ್ಲು ಸೂತ್ರಬೈಲು ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ನಗ-ನಗದು ದೋಚಿದ್ದರೆ,ಇನ್ನೊಂದು ಮನೆಯಲ್ಲಿ ಕಳವಿಗೆ ವಿಫಲಯತ್ನ ನಡೆದಿದೆ. ಇರಾ ಗ್ರಾಮದ ಸೂತ್ರಬೈಲು ನಿವಾಸಿ ಇಬ್ರಾಹಿಂ ರಿಯಾಜ್ ಎಂಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ.ಕಿಟಕಿಯ ಮೂಲಕ ಚಿಲಕ ತೆಗೆದು ಒಳಪ್ರವೇಶಿಸಿದ ಕಳ್ಳರು ಮನೆಮಂದಿ ಮಲಗಿದ್ದ ಕೋಣೆಯಲ್ಲಿದ್ದ ಕಪಾಟಿನಲ್ಲಿದ್ದ ನಗ,ನಗದನ್ನು ದೋಚಿದ್ದಾರೆ. ಸುಮಾರು 12 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ ಮಗುವಿನ ಬ್ರಾಸ್ ಲೈಟ್ ಹಾಗೂ 200 ರೂ.
ನಗದು ಹಣವನ್ನು ಕಳವು ಗೈಯಲಾಗಿದೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಇಬ್ರಾಹಿಂ ರಿಯಾಜ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ನಗ-ನಗದಿನ ಮೌಲ್ಯ ಸುಮಾರು 50ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಳಿಕ ಕಳ್ಳರು ಪಕ್ಕದ ಇಸ್ಮಾಯಿಲ್ ಎಂಬವರ ಮನೆಗೂ ನುಗ್ಗಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಶನಿವಾರ ಬೆಳಿಗ್ಗೆ ಬೆರಳಚ್ಚು ತಜ್ಞರು, ಶ್ವಾನದಳವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಂಟ್ವಾಳಗ್ರಾಮಾಂತರ ಠಾಣೆಯ ಎಸ್.ಐ.ಪ್ರಸನ್ನ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

