ಕೈಕಂಬ : ದೇಶದಲ್ಲಿ ಈಗ ಹೆಚ್ಚಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟ ಪರಿಸ್ಥಿತಿ ವಿರುದ್ಧ ಎಡಪಕ್ಷಗಳ ಅಖಿಲ ಭಾರತ ಪ್ರತಿಭಟನಾರ್ಥವಾಗಿ ಸಿಪಿಐಎಂ ಗುರುಪುರ ವಲಯ ಸಮಿತಿ ವತಿಯಿಂದ ಅ. 14ರಂದು ಸಂಜೆ ಗುರುಪುರ ಕೈಕಂಬ ಜಂಕ್ಷನಿನಲ್ಲಿ `ಸಾರ್ವಜನಿಕ ಸಭೆ’ ನಡೆಸಿತು.ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಐದು ವರ್ಷಗಳಲ್ಲಿ ಏನೂ ಮಾಡದ ಪ್ರಧಾನಿ ಮೋದಿ 2019ರ ಮಹಾ-ಚುನಾವಣೆ ಹೊತ್ತಿಗೆ ಎನ್ಡಿಎಗೆ ಇನ್ನೈದು ವರ್ಷಗಳ ಅವಕಾಶ ಕೊಡಿ ಎಂದು ಪ್ರಚಾರ ನಡೆಸಿದ್ದರು. ಎನ್ಡಿಎ ಅವಧಿಯಲ್ಲಿ ದೇಶದಲ್ಲಿ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಜಿಡಿಪಿ ಕುಸಿಯುತ್ತಲೇ ಇದೆ ಎಂದರು.
ದೇಶದಲ್ಲಿ ಜವುಳಿ, ಕಟ್ಟಡ ನಿರ್ಮಾಣ ಉದ್ದಿಮೆ ಕುಸಿದಿದೆ. ರೈತಾಪಿ ವರ್ಗ ಕಂಗಾಲಾಗಿದೆ. ಬಡತನ ಹೆಚ್ಚಾಗುತ್ತಿದೆ. ತನ್ನ ಗೆಲುವಿಗೆ ಕೋಟ್ಯಂತರ ಹಣ ಒದಗಿಸಿದ ಅಂಬಾನಿ, ರಿಲಯನ್ಸ್, ಬಿರ್ಲಾರಂತಹವರ ಕಂಪೆನಿಗಳಿಗೆ ಲಾಭ ತಂದುಕೊಡುವಂತಹ ನೀತಿ ರೂಪಿಸುತ್ತಿದೆ. ಬಿಎಸ್ಸೆನ್ನೆಲ್, ಶಸ್ತ್ರಾಸ್ತ್ರ ಕಾರ್ಖಾನೆ, ಭಾರತೀಯ ರೈಲ್ವೇ, ಏರ್ ಇಂಡಿಯಾ ಮೊದಲಾದ ಸಂಸ್ಥೆಗಳ ಖಾಸಗೀಕರಣಕ್ಕೆ ಮೋದಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಶೆಟ್ಟಿ ಆರೋಪಿಸಿದರು.
ಸಿಪಿಐಎಂ ಗುರುಪುರ ವಲಯ ಸಮಿತಿಯ ಸದಸ್ಯ ಯು ಬಿ ಲೋಕಯ್ಯ ಮಾತನಾಡುತ್ತ, ಬಂಡವಾಳಶಾಹಿಗಳು ಮತ್ತು ಕಾರ್ಪೊರೆಟ್ ಸಂಸ್ಥೆಗಳಿಗೆ ಹೇಳಿ ಮಾಡಿಸಿದ ಈ ಸರ್ಕಾರ, ದೇಶದ ಬಡಜನರು, ರೈತರು, ನಿರುದ್ಯೋಗಿಗಳು ಆಕಾಶ ನೋಡುವಂತೆ ಮಾಡಿದೆ. ಮೋದಿಗೆ ಓಟು ಕೊಟ್ಟು ಕೈಸೋತಿದ್ದೇವೆ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ ಎಂದರು.ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಕೆ ಸದಾಶಿವ ದಾಸ್ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಸಿಪಿಐಎಂ ಗುರುಪುರ ವಲಯ ಸಮಿತಿಯ ಸದಸ್ಯ ಗಂಗಯ್ಯ ಅಮೀನ್ ಉಪಸ್ಥಿತರಿದ್ದರು.
