ಬಂಟ್ವಾಳ: ಬಿ.ಸಿ.ರೋಡಿನ ವಕೀಲರೊಬ್ಬರು ತಾಪಂ ಜಾಗದಲ್ಲಿ ಕಂಪೌಂಡನ್ನು ಕೆಡವಿ ಅತಿಕ್ರಮಣ ಮಾಡಿರುವ ಕುರಿತು ತಾಪಂ ಎಸ್ ಜಿಎಸ್ ವೈ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರಲ್ಲಿ ಪರ,ವಿರೋಧ ಚರ್ಚೆ ಪರಸ್ಪರ ಜಟಾಪಟಿಗೆ ಕಾರಣವಾಯಿತು. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಈ ವಿಶೇಷ ಸಭೆಯಲ್ಲಿ ಈ ಮೋದಲು ತಾಪಙ ಜಾಗದ ಅವರಣಗೋಡೆಯನ್ನು ಕಾಮಗಾರಿಯ ಹಿನ್ನಲೆಯಲ್ಲಿ ಮೌಖಿಕ ಅನುಮತಿಯನ್ನು ಪಡೆದು ಕೆಡವಿದ್ದರು.
ಇದೀಗ ಆಜಾಗದಲ್ಲಿ ಕಾಲದಾರಿ ನಿರ್ಮಿಸಿ ಗೇಟ್ ಅಳವಡಿಸಿ ಸಮಸ್ಯೆಯನ್ನುಂಟು ಮಾಡಿದ್ದಾರೆ.ಈ ಕುರಿತು ಒಮ್ಮತದ ತೀರ್ಮಾನ ಹಾಗೂ ಕಾನೂನು ಕ್ರಮ ಜರಗಿಸುವ ಕುರಿತುಈ ವಿಶೇಷ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯಲ್ಲಿ ಪ್ರಸ್ತಾವಿಸಿದರು. ಈ ಸಂದರ್ಭ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು,ಪ್ರತಿಕ್ರಿಯಿಸಿ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರ ಮನವಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಸೂಚನಾಪತ್ರವನ್ನು ಸಭೆಯಲ್ಲಿ ವಾಚಿಸಿದರು. ಅತಿಕ್ರಮಣ ತೆರವುಗೊಳಿಸುವ ಸಂದರ್ಭದಲ್ಲಿ ಏಕರೀತಿ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಸಾರ್ವ ಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಸದಸ್ಯ ಪ್ರಭಾಕರ ಪ್ರಭು ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಮಾತನಾಡಿ, ತಾಪಂಗೆ ಸೇರಿದ ಎಲ್ಲಾ ಆಸ್ತಿಯನ್ನು ಉಳಿಸಿಕೊಳ್ಳುವಂತೆ ಹಾಗೂ ಅದರ ರಕ್ಷಣೆ ಮಾಡುವಂತೆ ಈ ಹಿಂದೆಯೇ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದೆ,ಇದೀಗ ಅದರ ಮುಂದುವರಿದ ಭಾಗವಾಗಿ ತಾಪಂ ಕಚೇರಿ ಅವರಣದಲ್ಲಿಯೇ ಅತಿಕ್ರಮಣ ನಡೆದಿದೆ.
ಇನ್ನಾದರೂ ತಾಪಂ ವ್ಯಾಪ್ತಿಗೆ ಸೇರಿದ ಜಾಗವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು. ಮಿನಿವಿಧಾನ ಸೌಧ ನಿರ್ಮಾಣವೇ ಕಾನೂನು ಬಾಹಿರ..! ಆಗ ಮಧ್ಯಪ್ರವೇಶಿಸಿದ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ತಾಲೂಕು ಪಂಚಾಯತ್ ನ ಆಸ್ತಿ ವಿವಿಧೆಡೆ ಅತಿಕ್ರಮವಾಗಿದೆ, ಅಲ್ಲದೆ ಕಚೇರಿ ಪಕ್ಕದಲ್ಲಿಯೇ ನಿಯಮ ಮೀರಿ ಹಲವು ಕಟ್ಟಡಗಳ ನಿರ್ಮಾಣವಾಗಿದೆ,ಆಗ ಮಾತನಾಡದವರು ಈಗ ಯಾಕೆ ಮಾತನಾಡುವುದು ಎಂದು ಪ್ರಶ್ನಿಸಿದರಲ್ಲದೆ, ಹಿಂದಿನವರಿಗೆ ಮಾಡಿದ ರಿಯಾಯಿತಿಯನ್ನೇ ಈಗಿನವರೆಗೂ ನೀಡಬೇಕು, ಇಲ್ಲವಾದಲ್ಲಿ ಎಲ್ಲರವಿರುದ್ದವೂ ಕ್ರಮ ಕೈಗೊಳಬೇಕು ಎಂದು ಪ್ರಭು ಆಗ್ರಹಿಸಿದರು. ನಿಯಮವೆಂದು ನೋಡಿದರೆ ಬಂಟ್ವಾಳ ಮಿನಿವಿಧಾನಸೌಧದ ಹಿಂದೆ ಅಗ್ನಿಶಾಮಕದಳ ವಾಹನ ತಿರುಗಲು ಅಸಾಧ್ಯ, ಇದು ನಿಯಮಬಾಹಿರವಲ್ಲವೇ..? ಎಂದವರು ಪ್ರಶ್ನಿಸಿದರು.
ಇದೇ ವೇಳೆ ಎಲ್ಲರಿಗೂ ಒಂದೇ ಕಾನೂನಿನ್ವಯ ಕ್ರಮ ಕೈಗೊಳ್ಳುವಂತೆ ಹಾಗೂ ಅತಿಕ್ರಮಣ ಮಾಡಿದವರಿಗೆ ನೋಟಿಸ್ ಜಾರಿಗೊಳಿಸುವಂತೆ ಪ್ರಭು ಒತ್ತಾಯಿಸಿದರೆ,ಕಾಂಗ್ರೆಸ್ ಸದಸ್ಯರು ವಕೀಲರೊಬ್ಬರು ಅತಿಕ್ರಮಣಗೊಳಿಸಿ ಜಾಗವನ್ನು ಈ ಕೂಡಲೇ ತೆರವು ಗೊಳಿಸುವಂತೆ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟುಹಿಡಿದಾಗ ಉಭಯ ಪಕ್ಷಗಳ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.ಆಗ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಅಬ್ಬಾಸ್ ಆಲಿ,ಸದಸ್ಯ ಹೈದರ್ ಅವರು ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನ ಪಡಿಸಿ ಸ್ವ ಸ್ಥಾನದಲ್ಲಿ ಕೂರಿಸುವಲ್ಲಿ ಯಶಸ್ವಿಯಾದರು.
ಅಧ್ಯಕ್ಷರಿಂದ ರೂಲಿಂಗ್ : ಸದಸ್ಯರ ಅಭಿಪ್ರಾಯವನ್ನು ಆಲಿಸಿದ ಬಳಿಕ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ತಾಪಂ ವ್ಯಾಪ್ತಿಯಲ್ಲಿ ಅತಿಕ್ರಮಣಗೊಂಡಿರುವ ಜಾಗವನ್ನು ರಹಶೀಲ್ದಾರ್ ನೇತೃತ್ವದಲ್ಲಿ ಶುಕ್ರವಾರದಿಂದಲೇ ಸರ್ವೇ ಮಾಡುವುದು,ತಾಪಂ ವ್ಯಾಪ್ತಿಯ ಕೆಲ ಜಾಗವು ಪುರಸಭಾ ವ್ಯಾಪ್ತಿಯಲ್ಲಿ ಬರುವ ಜಾಗವಮ್ನುಸರ್ವೇ ಮಾಡುವುದು,ಅವರಣಗೋಡೆ ನಿರ್ಮಿಸಿ ತಾಪಂ ಅಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಲ್ಲದೆ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದೆಂದು ರೂಲಿಂಗ್ ಪ್ರಕಟಿಸಿದರು.
ಬಿಸಿಬಿಸಿ ಹಲ್ಲೆ: ಅತಿಕ್ರಮಣದ ವಿಚಾರದಲ್ಲಿ ಚರ್ಚೆಯ ಮಧ್ಯ ಸದಸ್ಯ ಉಸ್ಮಾನ್ ಕರೋಪಾಡಿ ಅವರು ಮಾತನಾಡುತ್ತಾ,ತಾಪಂ ನ ಜಾಗವನ್ನು ಅತಿಕ್ರಮಣ ಮಾಡಿರುವುದು ಸದಸ್ಯರ ಮೇಲೆ ಮಾಡಿರುವ ಹಲ್ಲೆಯಾಗಿದೆ ಎಂದು ಬಣ್ಣಿಸಿದಾಗ ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ಸದಸ್ಯ ರಮೇಶ್ ಕುಡ್ಮೇರು ಈ ಮೊದಲು ತಾಪಂ ಜಾಗವನ್ನು ಪ್ರಭಾವಿಗಳು ಅತಿಕ್ರಮಣ ಮಾಡಿ ಹಲ್ಲೆ ಮಾಡಿದ್ದಾರೆ ಎಂದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಈಗ ಆಗಿರುವಂತದ್ದು ಬಿಸಿಬಿಸಿ ಹಲ್ಲೆ ಎಂದು ಹೇಳಿದಾಗ ಎಲ್ಲ ಮಹಿಳಾ ಸದಸ್ಯೆಯರು ಎದ್ದು ನಿಂತರು. ಎಲ್ಲಾ ಹಲ್ಲೆಗಳು ಒಂದೇ ಎಲ್ಲರಿಗೂ ಒಂದೇ ಕಾನೂನಿನ್ವಯ ಕ್ರಮಕೈಗೊಳ್ಳುವಂತೆ ಪ್ರಭಾಕರ ಪ್ರಭು ತಿರುಗೇಟು ನೀಡಿ ಚರ್ಚೆಗೆ ತೆರೆ ಎಳೆದರು. ಉಪಾಧ್ಯಕ್ಷ ಆಬ್ಬಾಸ್ ಆಲಿ,ತಹಶೀಲ್ದಾರ್ ರಶ್ಮಿ ಎಸ್.ಆರ್.,ಸಿಐ ಟಿ.ಡಿ.ನಾಗರಾಜ್ ಉಪಸ್ಥಿತರಿದ್ದರು.ಇಒ ರಾಜಣ್ಣ ಸ್ವಾಗತಿಸಿ,ವಂದಿಸಿದರು.ಸದಸ್ಯರಾದ ಹೈದರ್ ಕೈರಂಗಳ,ಸಂಜೀವ ಪೂಜಾರಿ,ಶಿವಪ್ರಸಾದ್,ಯಶವಂತ ಪೂಳಲಿ, ಗಣೇಶ್ ಸುವರ್ಣ,ಮಹಾಬಲ ಆಳ್ವ,ನವೀನ್ ಪೂಜಾರಿ,ಗೀತಾ ಚಂದ್ರಶೇಖರ್,ಲಕ್ಷ್ಮೀಗೋಪಾಲಾಚಾರ್ಯ ಚರ್ಚೆಯಲ್ಲಿ ಪಾಲ್ಗೊಂಡರು.



