ಬಂಟ್ವಾಳ : ಪ್ರಧಾನಿ ನರೇಂದ್ರಮೋದಿಯವರ ಇಚ್ಚಾ ಶಕ್ತಿ,ಗೃಹ ಸಚಿವ ಅಮಿತ್ ಶಾ ಅವರ ರಣನೀತಿಯ ಫಲವಾಗಿ ಕಾಶ್ಮೀರಕ್ಕೆ ವಿಧಿಸಲಾದ ವಿಶೇಷ ಸ್ಥಾನಮಾನ370ನೇ ಹಾಗೂ 35ಎ ರದ್ಧಾಗಿದೆ. ಕೇಂದ್ರದ ಈ ಐತಿಹಾಸಿಕ ನಿರ್ಧಾರಕ್ಕೆ ಪ್ರತಿಯೊಬ್ಬರೂ ಸಂಭ್ರಮಿಸಿದ್ದು, ಇಡೀ ದೇಶವೇ ಕೇಂದ್ರ ಸರಕಾರದ ಜತೆ ನಿಂತಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಮಂಗಳವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಂವಿಧಾನದ ೩೭೦ನೇ ವಿಧಿರದ್ಧತಿಯ ರಾಷ್ಟ್ರೀಯ ಏಕತಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಹಿಂದೆ ಬಿಜೆಪಿಯು ಕಾಶ್ಮೀರದಲ್ಲಿ ಸಮ್ಮಿಶ್ರ ಸರಕಾರ ರಚಿಸಿದಾಗ ಅಧಿಕಾರಕ್ಕಾಗಿ ಮತೀಯ ಪಕ್ಷವೊಂದರ ಜತೆ ಸೇರಿದೆ ಎಂದು ಆರೋಪಿಸಲಾಗುತಿತ್ತು, ಆದರೆ 370ನೇ ವಿಧಿಯ ರದ್ಧತಿಗಾಗಿ ಸಕಾಲದಲ್ಲಿ ಬೆಂಬಲವನ್ನು ವಾಪಸು ಪಡೆಯುವ ನಿಟ್ಟಿನಲ್ಲೆ, ಬಿಜೆಪಿಯು ಅಲ್ಲಿನ ಪಕ್ಷಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ಕೈಕೊಂಡಿದ್ದರು ಎಂದು ವಿಶ್ಲೇಷಿಸಿದರು. ತಾನು ಚೆನ್ನವೀರ ಕಣವಿ, ಷಡಾಕ್ಷರಿ ಪಂಚಾಕ್ಷರಿ, ಸುಧಾಮೂರ್ತಿ ಮೊದಲಾದವರನ್ನು ಭೇಟಿಯಾದ ಸಂದರ್ಭ ದಲ್ಲಿ ಅವರು ಮೋದಿ ಹಾಗೂ ಷಾ ಅವರ ನಿರ್ಧಾರ ಕುರಿತು ಗೌರವದ ಮಾತುಗಳನ್ನಾಡಿದ್ದರು ಎಂದ ಅವರು ಕೇಂದ್ರದ ಈ ಐತಿಹಾಸಿಕ ನಿರ್ಧಾರದ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿ ಹೇಳಬೇಕು ಎಂದರು.

ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದ ಉನ್ನತಿಗಾಗಿ ಅಳಿಲ ಸೇವೆಯನ್ನು ಮಾಡಿದ್ದು,ಅಖಂಡ ಭಾರತಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಾಶ್ಮೀರ ವಿಚಾರದಲ್ಲಿ ಜನ್ಮತಾಳಿದ ಬಿಜೆಪಿ ಪಕ್ಷವು ಈಗ ತನ್ನ ಉದ್ದೇಶವನ್ನು ಈಡೇರಿಸಿ, ಭಾರತ ಮಾತೆಯ ಮುಕುಟವನ್ನು ಉಳಿಸಿದೆ ಎಂದರು. ಅಮೇರಿಕಾದಂತಹ ರಾಷ್ಟವೇ ಮೋದಿ ನಾಯಕತ್ವವನ್ನು ಒಪ್ಪಿಕೊಂಡಿರುವುದು ಕಳೆದ ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಸಾಭೀತಾಗಿದೆ. ಮುಂದಿನ ದಿನಗಳಲ್ಲಿ ಸುಂದರ ಬಂಟ್ವಾಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಏಕತಾ ಅಭಿಯಾನದ ಸಂಚಾಲಕ ಸತೀಶ್ ಕುಂಪಲ, ಸಹಸಂಚಾಲಕಿ ಪೂಜಾ ಪೈ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬಂಟ್ವಾಳಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪÇಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್ ,ದಿನೇಶ್ ಅಮ್ಟೂರು,ಮೊದಲಾವರಿದ್ದರು. ಕಾಶ್ಮೀರ ರದ್ಧತಿಯ ವಿಚಾರದಲ್ಲಿ ಪ್ರಧಾನಿ ಕಾರ್ಯಾಲಯದಿಂದ ಬಂದ ಪ್ರಶಂಸತಾ ಪತ್ರವನ್ನು ಲಕ್ಷೀನಾರಾಯಣ್ ಜಕ್ರಿಬೆಟ್ಟು ಅವರಿಗೆ ಹಸ್ತಾಂತರಿಲಾಯಿತು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ೩೭೦ನೇ ವಿಧಿ ರದ್ಧತಿಯ ವಿಚಾರವಾಗಿ ಸಚಿವರು ಮನೆ ಭೇಟಿ ಕಾರ್ಯಕ್ರಮ ನಡೆಸಿದರು. ಬಿ.ಸಿ.ರೋಡಿನ ಗುರುದತ್ತ್ ಶೆಣೈ ಹಾಗೂ ಬಂಟ್ವಾಳ ಕೆಳಗಿನಪೇಟೆಯ ಖಲೀಲ್ ಅವರ ಮನೆಗೆ ಭೇಟಿ ನೀಡಿ, 370ನೇ ವಿಧಿ ರದ್ಧತಿಯ ಕುರಿತು ಮಾತನಾಡಿದರು. ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಬಿಜೆಪಿ ಪ್ರಮುಖರು ಜೊತೆಗಿದ್ದರು.
