ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ(ಸೆ. 21) ಸಂಘದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ನಡೆಯಿತು.
ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಅಧ್ಯಕ್ಷ ಶೆಟ್ಟಿ, ಈ ಬಾರಿ ಸಂಘ ವಜ್ರಮಹೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಸಂಘದ ವಾಮಂಜೂರು ಶಾಕಾ ಕಚೇರಿ `ಸಾಧನಾ ಸಹಕಾರಿ ಸೌಧ’ ಕಟ್ಟಡದ ಉದ್ಘಾಟನಾ ಸಮಾರಂಭ ಅಕ್ಟೋಬರ್ 2ರಂದು ಜರುಗಲಿದೆ. ವಜ್ರಮಹೋತ್ಸವದ ಈ ಸುಸಂದರ್ಭದಲ್ಲಿ, ಗಳಿಕೆಯಲ್ಲಿರುವ ಸಂಘವು ಸದಸ್ಯ ಬಂಧುಗಳ ಡಿವಿಡೆಂಡ್ ಮೊತ್ತವನ್ನು ಶೇ 20ರಿಂದ 22ಕ್ಕೆ ಏರಿಸಲಿದೆ ಮತ್ತು ಅಂದು 10 ಮಂದಿ ಹಿರಿಯ ಕೃಷಿಕರನ್ನು ಸನ್ಮಾನಿಸಲು ನಿರ್ಧರಿಸಿದೆ ಎಂದರು.
ಹೊಸ ಕಟ್ಟಡದಲ್ಲಿರುವ ಅಂಗಡಿಗಳಲ್ಲಿ ಆಸಕ್ತ ಸದಸ್ಯರಿಗೆ ವ್ಯವಹಾರ ನಡೆಸಲು ಪ್ರಥಮ ಆದ್ಯತೆ ನೀಡಬೇಕೆಂದು ಸದಸ್ಯ ಕಿಟ್ಟಣ್ಣ ರೈ, ರಾಜೀವ ಸಲ್ಲಾಜೆ, ವರದರಾಜ ಆಗ್ರಹಿಸಿದಾಗ, ಸಂಘವು ಎಲ್ಲ ವ್ಯವಹಾರಗಳನ್ನು ಸಂಘದ ನಿಯಮದಡಿ ನಿರ್ವಹಿಸಲಿದೆ ಎಂದು ಅಧ್ಯಕ್ಷ ಉತ್ತರಿಸಿದರು.
ಈ ವೇಳೆ, ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಎಸ್ಸೆಸ್ಸೆಲ್ಸಿ ಮತ್ತು ಪಿಯು ಮಕ್ಕಳಿಗೆ ಸುಮಾರು 2.05 ಲಕ್ಷ ರೂ ಸ್ಕಾಲರ್‍ಶಿಪ್ ಚೆಕ್ ವಿತರಿಸಿತು. ಸಂಘದ ಮುಖ್ಯ ನಿರ್ವಹಣಾಧಿಕಾರಿ ಬಿ ನಾಗರಾಜ್ ರಾವ್ ವಾರ್ಷಿಕ ವರದಿ ವಾಚಿಸಿ, ಸದಸ್ಯರ ಸಂಸೇಹ, ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಪಿ ಶೇಖಬ್ಬ, ಸದಾಶಿವ ಶೆಟ್ಟಿ, ಸಚಿನ್ ಅಡಪ, ನರೇಶ್ ಕುಮಾರ್, ಶೀನ ಕೋಟ್ಯಾನ್, ನಳಿನಿ ಶೆಟ್ಟಿ, ರೀತಾ ಸುವರ್ಣ, ನಾಗೇಶ್ ಕೆ, ರಾಜು ಉಪಸ್ಥಿರಿದ್ದರು. ಸಂಘದ ಸದಸ್ಯ ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರೆ, ನಾಗೇಶ್ ಕೆ ವಂದಿಸಿದರು.



