ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಮೆಕ್ಯಾನಿಕಲ್ ತರಬೇತಿ ಸಂಸ್ಥೆಯನ್ನು ಸರಕಾರದ ನಿಯಮಾವಳಿಯನ್ವಯ ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಪ್ರೌಢ ಶಿಕ್ಷಣ ಇಲಾಖಾ ನಿರ್ದೇಶಕರು ಲಿಖಿತವಾಗಿ ತಿಳಿಸಿರುವ ಹಿನ್ನಲೆಯಲ್ಲಿ ಸ್ಥಳೀಯರಲ್ಲಿ ನಿರಾಶೆಯನ್ನುಂಟು ಮಾಡಿದೆ. ಮೆಕ್ಯಾನಿಕಲಾ ತರಬೇತಿ ಸಂಸ್ಥೆಯನ್ನು ಪುನರಾರಂಭಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್ ಎಂಬವರು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದರು. ಆದರೆ ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಸರಕಾರದ ನಿಯಮಾವಳಿ ಪ್ರಕಾರ ತರಬೇತಿ ಸಂಸ್ಥೆಯನ್ನು ಪುನರಾರಂಭಿಸಲು ಅಸಾಧ್ಯ ಪ್ರೌಢ ಶಿಕ್ಷಣ ಇಲಾಖಾ ನಿರ್ದೇಶಕರು ಲಿಖಿತವಾಗಿ ತಿಳಿಸಿದ್ದು, ಜನರ ತೆರಿಗೆ ಹಣದಿಂದ ಆರಂಭವಾದ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಈ ಸಂಸ್ಥೆ ಶಾಶ್ವತವಾಗಿ ಮುಚ್ಚುವ ಆತಂಕ ಎದುರಾಗಿದೆ. ಈ ಸಂಸ್ಥೆಯ ಕಟ್ಟಡ ಮಾತ್ರವಲ್ಲ ಅಲ್ಲಿರುವ ಸಾವಿರಾರು ರೂ.ಬೆಲೆಯ ಪೀಠೋಪಕರಣ, ಯಂತ್ರೋಪಕರಣ ತುಕ್ಕು ಹಿಡಿಯಲಿದೆ.
ಮಣಿನಾಲ್ಕೂರು ಗ್ರಾಮದಲ್ಲಿ 16 ವರ್ಷಗಳಿಂದ ಕಾರ್ಯಾಚರಿಸಿದ ಈ ತರಬೇತಿ ಸಂಸ್ಥೆಯು 2011ರಿಂದ ತರಬೇತಿಯನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ತಮ್ಮ ಕಾಲಬುಡದಲ್ಲಿ ವೃತ್ತಿ ಶಿಕ್ಷಣವನ್ನು ಪಡೆಯುವ ಮಹತ್ವಕಾಂಕ್ಷೆ ಯೋಜನೆಯನ್ನು ಕಳೆದುಕೊಳ್ಳುವಂತಾಗಿದೆ. ಈ ತರಬೇತಿ ಸಂಸ್ಥೆಗಳನ್ನು ಸಂಪೂರ್ಣವಾಗಿ ಕಾಯಕಲ್ಪ ಗೊಳಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೆಕ್ಯಾನಿಕಲ್ ಟ್ರೈನಿಂಗ್ ಕೋರ್ಸ್ ಪುನರಾರಂಭಿಸುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರಕಾರದ ಪ್ರಧಾನ ಕಾರ್ಯದರ್ಶಿಗಳು ವೃತ್ತಿ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.ಇದೀಗ ಸರಕಾರದ ಆದೇಶದಂತೆ ವೃತ್ತಿ ತರಬೇತಿ ಸಂಸ್ಥೆಗಳನ್ನು ಪುನರಾರಂಭಿಸಲು ಅಸಾಧ್ಯ ಎಂದು ಲಿಖಿತವಾಗಿ ತಿಳಿಸಿರುವ ಹಿನ್ನಲೆಯಲ್ಲಿ ಮೆಕ್ಯಾನಿಕಲ್ ಟ್ರೈನಿಂಗ್ ಸೆಂಟರ್ ಪುನರಾರಂಭಕ್ಕೆ ಮಾಡಿದ ಪ್ರಯತ್ನಕ್ಕೆ ತಿಲಾಂಜಲಿ ಇಟ್ಟಂತಾಗಿದೆ. ಶಾಸಕರಿಗೆ ಮತ್ತೊಮ್ಮೆ ಮನವಿ ; ಸ್ವಯಂ ಉದ್ಯೋಗ ಹೊಂದಿ ಸ್ವಾವಲಂಬನೆ ಬದುಕು ಸಾಧಿಸಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಈ ವೃತ್ತಿ ಶಿಕ್ಷಣ ಸಂಸ್ಥೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪುನರಾರಂಭಿಸುವ ಬಗ್ಗೆ ಶಿಕ್ಷಣ ಸಚಿವರ ಮೂಲಕ ಸರಕಾರದಿಂದ ಸೂಕ್ತ ಆದೇಶವನ್ನು ಹೊರಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಹುಕಾಲದ ಈ ಬೇಡಿಕೆಯನ್ನು ಈಡೇರಿಸುವಂತೆ ಎನ್ ಸುಬ್ರಹ್ಮಣ್ಯ ಭಟ್ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರಿಗೆ ಮತ್ತೊಮ್ಮೆ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.