ಕೋಲಾರ : ಕೋಲಾರ ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ರೈತರಿಗೂ ತಲುಪುವಂತಾಗಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕೃಷಿ ಇಲಾಖೆ, ಕೋಲಾರ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವೇಮಗಲ್‍ನ ಮುನಿನಂಜಮ್ಮ ಪೆದ್ದಣ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನ ಹಾಗೂ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡಗಳ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಅನುಕೂಲವಾಗಲೆಂದು ಪ್ರಧಾನಮಂತ್ರಿಯವರು ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದರು. ಪ್ರತಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂಗಳನ್ನು 3 ಕಂತಿನಂತೆ ಹಾಕಲಾಗುತ್ತಿದೆ. ಫಸಲ್ ಭೀಮಾ ಯೋಜನೆಯಡಿ 18 ವರ್ಷದಿಂದ 45 ವರ್ಷದ ರೈತರು ಹಣವನ್ನು ಹೂಡಿ ತಿಂಗಳಿಗೆ 3000 ರೂ ಭತ್ಯೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು. IMG_20190830_210909
 ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದರೂ ರೈತರು ಇಸ್ರೇಲ್ ಮಾದರಿಯನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಡೀ ಏಷ್ಯಾದಲ್ಲೇ ಕೋಲಾರ ಜಿಲ್ಲೆಯು ಮಾರುಕಟ್ಟೆ ವ್ಯವಸ್ಥೆಯಲ್ಲಿ  2 ನೇ ಸ್ಥಾನ ಪಡೆದುಕೊಂಡಿದೆ. ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆಯು 10 ಲಕ್ಷ ಲೀಟರ್ ಹಾಲನ್ನು ಬೇರೆಯ ಕಡೆಗೆ ರಫ್ತು ಮಾಡಲಾಗುತ್ತಿದೆ. ಹಾಲಿನ ದರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಗೆ ಕೊಡುತ್ತಿರುವ ದರ ಕಡಿಮೆ ಇದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ತಿಳಿಸಿದರು. ಕೆ.ಸಿ ವ್ಯಾಲಿ ನೀರು ಜಿಲ್ಲೆಗೆ ಹರಿಯುತ್ತಿದ್ದು, ನರಸಾಪುರ, ವೇಮಗಲ್ ವ್ಯಾಪ್ತಿಯಲ್ಲಿ 25 ಕೆರೆಗಳು ತುಂಬಿವೆ. ರೈತರು ಯಾವುದೇ ರೀತಿಯಲ್ಲಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರನ್ನು ಬಳಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.  ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗುತ್ತಿದ್ದು, ನದಿ ಜೋಡಣೆಗೆ ಆದ್ಯತೆ ನೀಡಲಾಗುವುದು ಈ ಕುರಿತು ಈಗಾಗಲೇ ಕೇಂದ್ರ ಜಲ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಕೇಂದ್ರ ಸರ್ಕಾರವು ಜಲ ಮೂಲಗಳಿಗೆ 3.5 ಸಾವಿರ ಕೋಟಿ ಜಲ ಸಚಿವರಿಗೆ ಮಂಜೂರು ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯು ತುಂಬಾ ವಿಳಂಬವಾಗುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.
IMG_20190830_210901
 ರೈತರಿಗೆ ಅನುಕೂಲವಾಗಲೆಂದು ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.  ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನರಸಾಪುರ, ವೇಮಗಲ್ ವ್ಯಾಪ್ತಿಯಲ್ಲಿರುವ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ ಬೃಹತ್ ಉದ್ಯೋಗ ಮೇಳ ನಡೆಸಿ, ನಿರುದ್ಯೋಗ ಯುವಕರಿಗೆ ಹಾಗೂ ಉದ್ಯೋಗ ನೀಡುವಂತೆ ಭರವಸೆ ನೀಡಿದರು. ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಸರಿಯಾಗಿ ಬೆಳೆಯನ್ನು ಬೆಳೆದು 14 ವರ್ಷವಾಗಿದೆ. ರೈತರು ರಾಗಿ ಬಿತ್ತನೆ ಮಾಡಿ, 20 ದಿನಗಳಾಗಿದ್ದು, ಮಳೆ ಇಲ್ಲದೇ ಇನ್ನೂ ಮೊಳಕೆ ಬಂದಿಲ್ಲ. ಈ ರೀತಿಯ ಪರಿಸ್ಥಿತಿಯು ಜಿಲ್ಲೆ ಎದುರಿಸುತ್ತಿದೆ ಎಂದರು. IMG_20190830_210918
 ಕೆಸಿ ವ್ಯಾಲಿ ನೀರನ್ನು ಯಾವುದಾದರೂ ಒಂದು ದಿಕ್ಕಿನಲ್ಲಿ ಹರಿಸಬೇಕು. ಇಲ್ಲವಾದಲ್ಲಿ ಯಾವುದೇ ಕೆರೆಗಳು ಪೂರ್ಣವಾಗಿ ತುಂಬುವುದಿಲ್ಲ. ಇದರಿಂದ ರೈತರಿಗೆ ಅನಾನುಕೂಲವಾಗಲಿದೆ. ರೈತರಿಗೆ ನೀರು ತುಂಬಾ ಅವಶ್ಯಕತೆಯಿದ್ದು, ನೀರಿದ್ದರೆ ಯಾವುದೇ ರೀತಿಯ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಆಗ ಸರ್ಕಾರದ ಅನುದಾನಗಳಿಗೆ ರೈತರು ಅವಲಂಬಿಸಿರುವುದಿಲ್ಲ. ಯರ್ರಗೊಳ್ ಯೋಜನೆಯು 6-7 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಲಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಜನರು ನೀರಿನ ಬವಣೆಯನ್ನು ಎದುರಿಸುತ್ತಿದ್ದು, ಯಾವುದೇ ರೀತಿಯ ಸವಲತ್ತು ಇಲ್ಲದಿದ್ದರೂ ಸಹ ಬೆಂಗಳೂರು ಸೇರಿದಂತೆ ಇನ್ನಿತರ ಭಾಗಗಳಿಗೆ ತರಕಾರಿಯನ್ನು ಪೂರೈಸುತ್ತಿದ್ದಾರೆ.  ರೈತರಿಗೆ ಅನುಕೂಲವಾಗಲೆಂದು ಪ್ರತಿ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಇರಬೇಕೆಂದು ನಿಗದಿಪಡಿಸಿದ್ದು, ಜಿಲ್ಲೆಯಲ್ಲಿ 12 ಕಡೆ ಸ್ವಂತ ಕಟ್ಟಡವಿದ್ದು, 6 ಕಡೆ ಕಾಮಗಾರಿ ನಡೆಯುತ್ತಿದೆ. ನರಸಾಪುರ, ವೇಮಗಲ್ 2 ಕಡೆ ಉದ್ಘಾಟಿಸಲಾಗಿದೆ ಎಂದರು.
 ಕಳೆದ ವರ್ಷ ಮಳೆ ಬಾರದೇ ಬೆಳೆಹಾನಿಯಾಗಿದ್ದು, 27 ಕೋಟಿಯಷ್ಟು ಸರ್ಕಾರದಿಂದ ರೈತರಿಗೆ ನೀಡಲಾಗಿದೆ. ಈ ವರ್ಷ ಸಹ ಸರಿಯಾಗಿ ಮಳೆಯಾಗಿಲ್ಲದ ಕಾರಣ  ಪ್ರತಿ ತಿಂಗಳು 1 ನೇ ತಾರೀಖಿನಂದು ಬೆಳೆ ಸಮೀಕ್ಷೆ ನಡೆಸಿ, ರೈತರು ಬೆಳೆಯುವ ಬೆಳೆಯನ್ನು ಅದರ ಪೋಟೋಗಳನ್ನು ತೆಗೆದು ಅಪ್‍ಲೋಡ್ ಮಾಡಲಾಗುತ್ತದೆ. ಯಾವ ರೈತರು ಬೆಳೆ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಅಂತಹ ರೈತರಿಗೆ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರಧಾನಮಂತ್ರಿ  ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 6000 ರೂ ಹಾಗೂ ರಾಜ್ಯ ಸರ್ಕಾರದಿಂದ 4000  ರೂಗಳನ್ನು ನೀಡುತ್ತಿದ್ದು, ಈವರೆಗೆ 1.5 ಲಕ್ಷ ರೈತರು ನೋಂದಣಿಯಾಗಿದ್ದಾರೆ. ನೋಂದಣಿಯಾಗದ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬಂದಿರುವುದರಿಂದ ನರಸಾಪುರ, ವೇಮಗಲ್ ವ್ಯಾಪ್ತಿಯಲ್ಲಿ 4.5 ಮೀ. ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಜಿಲ್ಲೆಯಲ್ಲಿ ನೀಲಗಿರಿ ಮರಗಳು ಹೆಚ್ಚಾಗಿದ್ದು, ರೈತರು ಅವುಗಳನ್ನು ತೆಗೆದು ಕೃಷಿಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
 ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ರೈತರು ಬೆಳೆಗಳನ್ನು ಬೆಳೆಯುಲು ಮುಂದಾಗಬೇಕು. ಸದ್ಯದಲ್ಲೇ ‘ಪಿ’ ನಂಬರ್‍ಗಳ  ಆರ್ಡರ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನರಸಾಪುರ ಹಾಗೂ ವೇಮಗಲ್ ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕರಾದ ಬಿ.ವೈ ಶ್ರೀನಿವಾಸ್, ವೇಮಗಲ್ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎಸ್. ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ, ಎಪಿಎಂಸಿ ಅಧ್ಕಕ್ಷರು ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಡಿ.ಎಲ್ ನಾಗರಾಜ್, ಕ್ಯಾಲನೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಷಾ ವೆಂಕಟೇಶ್‍ಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯಾದ ಎನ್.ವಿ ಬಾಬು,  ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್, ಅಧೀಕ್ಷಕರಾದ ಮಂಜುನಾಥ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By Suddi9

Leave a Reply

Your email address will not be published. Required fields are marked *