ಬಂಟ್ವಾಳ: ಉಚಿತ ದುರ್ವಾಸನೆ ಬೀರುತ್ತಿರುವ ಈ ತ್ಯಾಜ್ಯದ ಕೊಂಪೆಯಿರುವುದು ನಗರದ ಹೃದಯ ಭಾಗದಲ್ಲೇ. ತಾಲೂಕು ಕಚೇರಿ, ಜೆಎಂಎಫ್ಸಿ ನ್ಯಾಯಾಲಯ, ಉಪನೋಂದಾಣಿ ಕಚೇರಿ, ಪೊಲೀಸ್ ಠಾಣೆ, ಹಳೇ ತಾಲೂಕು ಪಂಚಾಯತ್ ಕಟ್ಟಡದ ಬಳಿಯೆ ಸಾರ್ವಜನಿಕರು ಕಸ ಎಸೆಯುತ್ತಿರುವುದರಿಂದ ಕಸದ ರಾಶಿ ಗುಡ್ಡೆಯಾಕರದಲ್ಲಿ ಬೆಳೆಯುತ್ತಿದೆ.

ಸ್ಥಳೀಯ ವ್ಯಾಫಾರಿಗಳು, ಕಚೇರಿ ಕೆಲಸಗಳಿಗೆ ಬರುವ ಸಿಬ್ಬಂದಿಗಳು, ಖಾಸಗಿ ನೌಕರರು ಇಲ್ಲಿ ಕಸ ಎಸೆಯುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.

ವಿವಿಧ ಕೆಲಸಗಳಿಗಾಗಿ ನ್ಯಾಯಾಲಯ ಪೊಲೀಸ್ ಠಾಣೆ, ತಾಲೂಕು ಕಚೇರಿ, ಉಪನೋಂದಣಿ ಕಚೇರಿಗೆ ಪ್ರತಿನಿತ್ಯ ನೂರಾರು ಮಂದಿ ಬಂದು ಹೋಗುತ್ತಾರೆ. ಆದರೆ ಈ ತ್ಯಾಜ್ಯದ ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಪುರಸಭೆ ಕಸ ಎಸೆಯಲು ಪ್ರತ್ಯೇಕ ತ್ಯಾಜ್ಯದ ತೊಟ್ಟಿ ಇಡದೇ ಇರುವುದರಿಂದ ಹಾಗೂ ಕಸ ಎಸೆಯುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದರಿಂದ ಇದು ಕಸ ಎಸೆಯುವ ಅಧಿಕೃತ ಸ್ಥಳವಾಗಿ ಮಾರ್ಪಡಾಗುತ್ತಿದೆ.
ಇಲ್ಲಿ ಅನಧಿಕೃತವಾಗಿ ಕಸ ಎಸೆಯುವ ಬಗ್ಗೆ ಮಾಧ್ಯಮಗಳು ಹಲವು ಬಾರಿ ವರದಿ ಮಾಡಿವೆ.

ಆದರೂ ಪುರಸಭೆ ಇಲ್ಲಿ ಕಸ ಹಾಕದಂತೆ ಯಾವುದೇ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ಇತ್ತೀಚೆಗೆ ಜೆಎಂಎಫ್ಸಿ ನ್ಯಾಯಾಲಯದಲ್ಲಿನ ಕಾರ್ಯಕ್ರಮವೊಂದಕ್ಕೆ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ  ಭೇಟಿ ನೀಡಿದ್ದಾಗ ಪುರಸಭೆ ಸ್ವಯಂ ಪ್ರೇರಿತವಾಗಿ ಕಸ ತೆರವುಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸಿತ್ತು. ಆದರೆ ಮರುದಿನವೇ ಅದೇ ಸ್ಥಳದಲ್ಲಿ ಕಸ ಸಂಗ್ರಹಗೊಳ್ಳಲಾರಂಭಿಸಿದೆ.

ಆ ಬಳಿಕ ಉಪನೋಂದಾಣಿ ಕಛೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಇಲ್ಲಿ ಕಸ ರಾಶಿ ಬಿದ್ದಿದಿರುವುದನ್ನು ಗಮನಿಸಿ ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಪರಿಸರವನ್ನು ಸ್ವಚ್ಚಗೊಳಿಸಿ ನಿತ್ಯವೂ ಸ್ಚಚ್ಛತೆ ಕಾಪಾಡುವಂತೆ ಆದೇಶಿಸಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಕೆಲವು ತಿಂಗಳುಗಳೇ ಉರುಳಿದರೂ ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿಲ್ಲ.

By Suddi9

Leave a Reply

Your email address will not be published. Required fields are marked *