ಪುಂಜಾಲಕಟ್ಟೆ: ಪುಂಜಾಲಕಟ್ಟೆ ಇಲ್ಲಿನ ಪತ್ರಿಕಾ ವಿತರಕ, ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಸೀತಾರಾಮ ಆಚಾರ್ಯ(60) ಅವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆ.22ರಂದು ನಿಧನ ಹೊಂದಿದರು.
ಮೃತರು ಪತ್ನಿ ಇಬ್ಬರು ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೂಲತಃ ಕಾವಳಮೂಡೂರು ನೆಲ್ಲಿಗುಡ್ಡೆಯವರಾದ ಅವರು ಪುಂಜಾಲಕಟ್ಟೆಯಲ್ಲಿ ಸುದೀರ್ಘ ವರ್ಷ ಸೈಕಲ್ ಶಾಪ್ ಹೊಂದಿದ್ದರು. ರಾ.ಸ್ವ.ಸೇ.ಸಂಘದ ಕಾರ್ಯಕರ್ತರಾಗಿದ್ದ ಅವರು ಆರಂಭದಲ್ಲಿ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ಯುವಕ ಮಂಡಲದ ಸದಸ್ಯರಾಗಿದ್ದು ಬಳಿಕ ಶ್ರೀ ಶಾರದಾಂಬ ಯಕ್ಷಗಾನ ಸಂಘದ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿದ್ದು ತಾಳಮದ್ದಳೆ ಕೂಟಗಳನ್ನು ಸಂಘಟಿಸುತ್ತಿದ್ದರು. ಶ್ರೀ ಶಾರದಾಂಬ ಯುವಕ ಮಂಡಲ, ಪುಂಜಾಲಕಟ್ಟೆ ಸ.ಪ್ರೌ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಉತ್ತಮ ನಾಟಕ ಕಲಾವಿದರಾಗಿದ್ದರು. ಕಳೆದ 20 ವರ್ಷಗಳಿಂದ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಯಕ್ಷಗಾನ ಸಮಿತಿಯ ಅರ್ಥದಾರಿಯಾಗಿದ್ದು ತಾಳಮದ್ದಳೆಯಲ್ಲಿ ತೊಡಗಿಸಿಕೊಂಡಿದ್ದರು. ವಿಶ್ವಕರ್ಮ ಬ್ರಾಹ್ಮಣ ಸಮಾಜದ ಕಾವಳಕಟ್ಟೆ ವ್ಯಾಪ್ತಿಯ ಮೊಕ್ತೇಸರರಾಗಿದ್ದರು.
ಮಾಜಿ ಶಾಸಕ ಪ್ರಭಾಕರ ಬಂಗೇರ . ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಜಿಲ್ಲಾ ಹಾ.ಉ.ಸಂಘದ ನಿರ್ಧೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ , ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಮತ್ತಿತರರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಮೃತರ ಶೋಕಾರ್ಥ ಮಂಗಳವಾರ ಪುಂಜಾಲಕಟ್ಟೆ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶೋಕಾಚರಣೆ ನಡೆಸಲಾಯಿತು.
