ಬಂಟ್ವಾಳ: ಮಾನಸಿಕ, ದೈಹಿಕವಾಗಿ ಸದೃಢರಾಗಲು ಬೇಕಾಗುವ ತರಬೇತಿಯನ್ನು ಶ್ರೀ ರಾಮ ಶಿಕ್ಷಣ ಸಂಸ್ಥೆಯು ನೀಡುತ್ತಿದ್ದು, ಅವಕಾಶಗಳು ಹೆಚ್ಚುತ್ತಿರುವ ಮುಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ನಿಶ್ಚಯಿಸಿರುವುದು ವಿದ್ಯಾರ್ಥಿಗಳ ಸೌಭಾಗ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವ ವರ್ಷ 2019- 2020ನೇ ಸಾಲಿನ” ಪ್ರಣವ” ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂತ್ರಜ್ಞಾನದ ಬಳಕೆ ಮಿತಗೊಳಿಸಿ ಪ್ರಾಕೃತಿಕ ಜೀವನದ ಸೊಗಡನ್ನು ಅನುಭವಿಸಿದಲ್ಲಿ ವಿದ್ಯಾರ್ಥಿ ಜೀವನ ಸಾರ್ಥಕ ಎಂದು ಅವರ ವಿದ್ಯಾರ್ಥಿ ಜೀವನದ ಸವಿನೆನಪನ್ನು ಮೆಲುಕು ಹಾಕುತ್ತಾ ಜೀವನದಲ್ಲಿ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಲು ಕಿವಿಮಾತು ಹೇಳಿದರು. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ದಶಮಾನೋತ್ಸವದ ಪ್ರಯುಕ್ತ 10 ಜನಪ್ರತಿನಿಧಿಗಳ ಉಪಸ್ಥಿತಿ ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುಲೋಚನಾ ಭಟ್, ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ್ ನಾಯ್ಕ, ಬಂಟ್ವಾಳ ಪುರಸಭಾ ಸದಸ್ಯ ಜಯರಾಮ ಜಿ, ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಕಮಲಾಕ್ಷಿ ಕೆ ಪೂಜಾರಿ, ಶಯನಾ ಜಯಾನಂದ್, ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮೀ ಗೋಪಾಲಾಚಾರ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಂತಿಮ ಬಿ.ಕಾಂ ವಿದ್ಯಾರ್ಥಿ ನಿತೇಶ್ ಕುಮಾರ್ ಹಾಗೂ ಬಹುಮತ ಪಡೆದು ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಅಂತಿಮ ಬಿಕಾಂ ವಿದ್ಯಾರ್ಥಿನಿ ರಶ್ಮಿತಾ ಎಮ್. ಎಸ್., ಜತೆಕಾರ್ಯದರ್ಶಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಯಜ್ಞಶ್ರೀ ಪ್ರಮಾಣ ವಚನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳಾದ ರಾಷ್ಟ್ರೀಯ ಸೇವಾ ಯೋಜನೆ, ವಾಣಿಜ್ಯ ಸಂಘ, ಸಾಹಿತ್ಯ ಸಂಘ, ಪರಿಸರ ಸಂಘ, ವಿಜ್ಞಾನ ಸಂಘ, ಸಾಂಸ್ಕೃತಿಕ ಸಂಘ, ಕ್ರೀಡಾ ಸಂಘ, ಮಾನವಿಕ ಸಂಘ ಮುಂತಾದ ಸಂಘದ ಪದಾಧಿಕಾರಿಗಳು ಪ್ರಮಾಣ ವಚನವನ್ನು ಸ್ವೀಕರಿಸಿದರು.. ಇತಿಹಾಸ ಉಪನ್ಯಾಸಕಿ ಶುಭಲತಾ ಚುನಾವಣಾ ವರದಿ ವಾಚಿಸಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ಸ್ವಾಗತಿಸಿ, ರಸಾಯನಶಾಸ್ತ್ರ ಉಪನ್ಯಾಸಕಿ ಕವಿತಾ ನಿರೂಪಿಸಿದರು, ಉಪನ್ಯಾಸಕ ಯತಿರಾಜ್ ವಂದಿಸಿದರು.
